ವಿಪಕ್ಷ ನಾಯಕರ ಆಯ್ಕೆ ಕಗ್ಗಂಟು | ಕೇಂದ್ರದ ಇಬ್ಬರು ವೀಕ್ಷಕರು ನಾಳೆ ಬೆಂಗಳೂರಿಗೆ: ದೆಹಲಿಯಲ್ಲಿ ಬಿ.ಎಸ್ ಯಡಿಯೂರಪ್ಪ ಹೇಳಿಕೆ
Update: 2023-07-02 19:01 GMT
ಬೆಂಗಳೂರು, ಜು.2: ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ವಿಪಕ್ಷ ನಾಯಕನ ಆಯ್ಕೆ ಸಂಬಂಧ ಚರ್ಚೆ ನಡೆಸಲು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿಎಸ್ ಯಡಿಯೂರಪ್ಪ ಅವರು ಇಂದು ಕೇಂದ್ರ ಗೃಹಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್ ಯಡಿಯೂರಪ್ಪ, ''ವೀಕ್ಷಕರಾಗಿ ವಿನೋದ್ ತಾವಡೆ, ಮನ್ಸುಖ್ ಮಾಂಡವೀಯ ಬರಲಿದ್ದಾರೆ. ಶಾಸಕರ ಜೊತೆ ಚರ್ಚಿಸಿ ಎಲ್ಲಾ ವಿವರ ವರಿಷ್ಠರಿಗೆ ತಿಳಿಸಲಿದ್ದಾರೆ. ವೀಕ್ಷಕರು ನೀಡುವ ವರದಿ ಆಧರಿಸಿ ವಿಪಕ್ಷ ನಾಯಕರ ನೇಮಕ ಮಾಡಲಾಗುವುದು'' ಎಂದು ತಿಳಿಸಿದರು.
''ಇನ್ನೆರಡು ಮೂರು ದಿನಗಳಲ್ಲಿ ವಿಪಕ್ಷ ನಾಯಕರ ಆಯ್ಕೆಯಾಗಲಿದೆ. ಅಗತ್ಯವಿದ್ದರೆ ಮತ್ತೊಮ್ಮೆ ದೆಹಲಿಗೆ ಕರೆಸಿಕೊಳ್ಳುತ್ತೇವೆ ಎಂದಿದ್ದಾರೆ'' ಎಂದು ತಿಳಿಸಿದರು.