ಅದಿರು ಅಕ್ರಮ: ಸಚಿವ ನಾಗೇಂದ್ರ ವಿರುದ್ಧದ ಆರೋಪ ನಿಗದಿ ಪ್ರಕ್ರಿಯೆ ಆ.31ಕ್ಕೆ ಮುಂದೂಡಿದ ಹೈಕೋರ್ಟ್

Update: 2023-08-07 17:33 GMT

ಬೆಂಗಳೂರು, ಆ.7: ಕಬ್ಬಿಣದ ಅದಿರನ್ನು ಅಕ್ರಮವಾಗಿ ಮಾರಾಟ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಯುವಜನ ಸಬಲೀಕರಣ, ಕ್ರೀಡೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ ಅವರ ವಿರುದ್ಧದ 16 ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣಾಧೀನ ನ್ಯಾಯಾಲಯದಲ್ಲಿ ಆರೋಪ ನಿಗದಿ ಪ್ರಕ್ರಿಯೆಯನ್ನು ಹೈಕೋರ್ಟ್ ಆಗಸ್ಟ್ ಅಂತ್ಯದವರೆಗೆ ಮುಂದೂಡಿದೆ.

ಪ್ರಕರಣಗಳನ್ನು ವಜಾ ಮಾಡುವಂತೆ ಕೋರಿ ನಾಗೇಂದ್ರ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಗಳ ವಿಚಾರಣೆಯನ್ನು ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು ವಿಚಾರಣೆ ನಡೆಸಿತು.

ಅರ್ಜಿದಾರರ ಪರ ಹಿರಿಯ ವಕೀಲ ಮೂರ್ತಿ ಡಿ ನಾಯಕ್ ಅವರ ವಾದ ಆಲಿಸಿದ ನ್ಯಾಯಾಲಯವು ಸಚಿವ ನಾಗೇಂದ್ರ ಅವರ ವಿರುದ್ಧ ವಿಚಾರಣಾಧೀನ ಕೋರ್ಟ್‍ನಲ್ಲಿ ಆರೋಪ ನಿಗದಿ ಪ್ರಕ್ರಿಯೆಯನ್ನು ಆ.31ರವರೆಗೆ ಮುಂದೂಡಲಾಗಿದೆ ಎಂದು ಆದೇಶಿಸಿತು.

ಈ ಹಂತದಲ್ಲಿ ನ್ಯಾಯಪೀಠವು ಈ ಮಧ್ಯಂತರ ಆದೇಶವನ್ನು ಹೈಕೋರ್ಟ್‍ನಲ್ಲಿನ ಪ್ರಕರಣಗಳ ಇತ್ಯರ್ಥದವರೆಗೆ ಮುಂದುವರಿಸಬೇಕು ಎಂದು ಕೋರಿದರು. ಇದಕ್ಕೆ ಪೀಠವು ನಿರಾಕರಿಸಿತು. ಅಲ್ಲದೆ, ಲೋಕಾಯುಕ್ತ ವಿಶೇಷ ತನಿಖಾ ದಳವನ್ನು(ಎಸ್‍ಐಟಿ) ಪ್ರತಿನಿಧಿಸಿರುವ ವಕೀಲ ಬಿ.ಎಸ್.ಪ್ರಸಾದ್ ಅವರ ವಾದಕ್ಕೆ ಪ್ರತಿಕ್ರಿಯಿಸಲು ಆ.18ಕ್ಕೆ ವಿಚಾರಣೆ ಮುಂದೂಡಿತು.

ಪ್ರಕರಣವೇನು?: ಅಕ್ರಮ ಅದಿರು ಮಾರಾಟ ಮತ್ತು ಇತರ ಆರೋಪಗಳಡಿ ನಾಗೇಂದ್ರ ವಿರುದ್ಧ ಒಟ್ಟು 16 ಪ್ರಕರಣಗಳಿವೆ. ಗಣಿ, ಖನಿಜ ಅಭಿವೃದ್ಧಿ ಮತ್ತು ನಿಯಂತ್ರಣಗಳ (ಎಂಎಂಡಿಆರ್) ಕಾಯ್ದೆ–1957ರ ಕಲಂ 21 ಮತ್ತು 23ರ ಜೊತೆಗೆ 4 (1), 4 (1ಎ) ಹಾಗೂ ಐಪಿಸಿ ವಿವಿಧ ಕಲಂಗಳ ಅಡಿಯಲ್ಲಿ ಈ ಪ್ರಕರಣಗಳನ್ನು ದಾಖಲಿಸಲಾಗಿದೆ.

ಪ್ರಕರಣಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಎಸ್‍ಐಟಿ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ವಿವಿಧ ಹಂತಗಳಲ್ಲಿ ವಿಚಾರಣೆಗೆ ಒಳಪಟ್ಟಿರುವ ಈ ಪ್ರಕರಣಗಳನ್ನು ವಜಾ ಮಾಡುವಂತೆ ಕೋರಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News