ನ.19ರಿಂದ ನ.21ರವರೆಗೆ ʼಟೆಕ್ ಸಮ್ಮಿಟ್ʼ ಆಯೋಜನೆ : ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು: ಬೆಂಗಳೂರು ಟೆಕ್ ಸಮ್ಮಿಟ್(ಬಿಟಿಎಸ್-2024) ನ.19ರಿಂದ ನ.21ರವರೆಗೆ ನಗರದಲ್ಲಿ ನಡೆಯಲಿದ್ದು, ಇದು ಜಾಗತಿಕ ಮಟ್ಟದಲ್ಲಿ ನಾವೀನ್ಯತೆ, ಸಂಶೋಧನೆ ಮತ್ತು ತಂತ್ರಜ್ಞಾನ-ಚಾಲಿತ ಬೆಳವಣಿಗೆಯ ಕೇಂದ್ರವಾಗಲಿದೆ ಎಂದು ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ಆಯೋಜಿಸಿದ್ದ ಬಿಟಿಎಸ್ 2024ರ ಜಾಗತಿಕ ಪಾಲುದಾರರ ಸಭೆಯಲ್ಲಿ ಮಾತನಾಡಿದ ಅವರು, ಸಮ್ಮಿಟ್‍ನಲ್ಲಿ ಅಂತಾರಾಷ್ಟ್ರೀಯ ಪಾಲುದಾರರು ತಮ್ಮ ತಾಂತ್ರಿಕ ಸಾಮರರ್ಥ್ಯಗಳನ್ನು ಪ್ರದರ್ಶಿಸಲು ಪೆವಿಲಿಯನ್ ಸ್ಥಾಪನೆಗೆ ಅಂತಾರಾಷ್ಟ್ರೀಯ ಪಾಲುದಾರರನ್ನು ಆಹ್ವಾನಿಸಲಾಗಿದೆ. ಬಿಟಿಎಸ್ ಹೊಸ ಹೊಸ ಆಲೋಚನೆಗಳ ವಿನಿಮಯ ಮಾಡಿಕೊಳ್ಳಲು ಮತ್ತು ಹೊಸತನವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಜಗತ್ತಿನಾದ್ಯಂತ ಪ್ರಕಾಶಮಾನವಾದ ಮನಸ್ಸುಗಳನ್ನು ಒಟ್ಟುಗೂಡಿಸುವ ನಿಟ್ಟಿನಲ್ಲಿ ಒಂದು ವೇಗವರ್ಧಕ ಶಕ್ತಿಯಾಗಿದೆ ಎಂದರು.
ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ.ಏಕರೂಪ್ ಕೌರ್ ಮಾತನಾಡಿ, ಗ್ಲೋಬಲ್ ಇನ್ನೋವೇಶನ್ ಅಲಾಯನ್ಸ್ ಮಾರ್ಕೆಟ್ ಅಕ್ಸೆಸ್ ಪ್ರೊಗ್ರಾಂ(ಜಿಐಎ) ವಿಶ್ವದಾದ್ಯಂತ 30 ದೇಶಗಳೊಂದಿಗೆ ಪಾಲುದಾರಿಕೆಯನ್ನು ಹೊಂದಿದ್ದು, ಜಾಗತಿಕ ಮಟ್ಟದಲ್ಲಿ ರಾಜ್ಯದ ಮಹತ್ವವನ್ನು ಸಾರಲಿದೆ. ಈ ಪಾಲುದಾರಿಕೆಗಳ ಮೂಲಕ ಕರ್ನಾಟಕವು ತನ್ನನ್ನು ತಾನು ತಂತ್ರಜ್ಞಾನ ಮತ್ತು ನಾವೀನ್ಯತೆಯ ರೋಮಾಂಚಕ ಕೇಂದ್ರವಾಗಿ ಯಶಸ್ವಿಯಾಗಿ ಹೊರಹೊಮ್ಮಲು ಸಾಧ್ಯವಾಗಿದೆ ಎಂದರು.
ಸ್ಟಾರ್ಟಪ್‍ಗಳು, ಉದ್ಯಮಿಗಳು ಮತ್ತು ಜಾಗತಿಕ ಸಂಸ್ಥೆಗಳ ಸ್ಥಾಪನೆಗೆ ಜಿಐಎ ಅನುಕೂಲಕರವಾದ ವಾತಾವರಣವನ್ನು ಸೃಷ್ಟಿಸಿದೆ. ಬೆಂಗಳೂರು ಟೆಕ್ ಸಮ್ಮಿಟ್‍ನಲ್ಲಿ ಬಾಗವಹಿಸುವ ನಿಟ್ಟಿನಲ್ಲಿ ಜಾಗತಿಕ ಪ್ರಭಾವದ ಪ್ರಯತ್ನಗಳ ಆರಂಭಕ್ಕೆ ಈ ಜಿಐಎ ಒಂದು ಉತ್ತಮ ವೇದಿಕೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಆಸ್ಟ್ರೇಲಿಯಾ, ಡೆನ್ಮಾರ್ಕ್, ಇಸ್ರೇಲ್, ಜಪಾನ್, ಸ್ವಿಟ್ಜರ್‍ಲ್ಯಾಂಡ್, ಯುಎಸ್‍ಎ, ಯುಕೆ, ಪೋಲಂಡ್, ಫಿನ್‍ಲ್ಯಾಂಡ್, ಫ್ರಾನ್ಸ್, ಜರ್ಮನಿ, ನೆದರ್‍ಲ್ಯಾಂಡ್ಸ್, ಇಟಲಿ ಮತ್ತು ಇನ್ನೂ ಅನೇಕ ದೇಶಗಳ ಪ್ರತಿನಿಧಿಗಳು ಸೇರಿದಂತೆ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಅಧಿಕಾರಿಗಳು ಇದ್ದರು.