ಕಲೆ, ಸಾಹಿತ್ಯಕ್ಕೆ ಸಂಪೂರ್ಣ ಪ್ರೋತ್ಸಾಹ: ಸಿಎಂ ಸಿದ್ದರಾಮಯ್ಯ
ಮೈಸೂರು,ಅ.15: ನಮ್ಮ ಸರಕಾರ ಕಲೆ, ಸಾಹಿತ್ಯಕ್ಕೆ ಸಂಪೂರ್ಣ ಪ್ರೋತ್ಸಾಹ ನೀಡಲಿದೆ. ಕನ್ನಡ ಸಾಂಸ್ಕೃತಿಕ ಹಿರಿಮೆ ವಿಶ್ವ ಖ್ಯಾತಿಯಾದದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.
ಅರಮನೆ ಆವರಣದಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾ ಪ್ರಯುಕ್ತ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಡಾ.ಪದ್ಮಾಮೂರ್ತಿ ಅವರಿಗೆ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ನೀಡಿ ಸನ್ಮಾನಿಸಿದ ಬಳಿಕ ಮಾತನಾಡಿದರು.
ʼಸಂಗೀತ, ಸಾಹಿತ್ಯಕ್ಕೆ ಕನ್ನಡ ನಾಡು ನಿರಂತರವಾಗಿ ಪ್ರೋತ್ಸಾಹದಾಯಕ ವಾಗಿದೆ. ನಾವೂ ಈ ಪರಂಪರೆಯನ್ನು ಮುಂದುವರಿಸುತ್ತಿದ್ದೇವೆʼ ಎಂದರು.
ರಾಜ್ಯದಲ್ಲಿ ಮಳೆ ಕೈ ಕೊಟ್ಟಿದೆ. ಬೆಳೆ ನಷ್ಟವಾಗಿದೆ. ಬರಗಾಲದ ಸ್ಥಿತಿ ಇಡಿ ರಾಜ್ಯವನ್ನು ಆವರಿಸಿದೆ. ಆದರೂ ಸರ್ಕಾರ ರೈತರ, ನಾಡಿನ ಜನತೆಯ ಕೈ ಹಿಡಿಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ಕೃಷ್ಣರಾಜ ಕ್ಷೇತ್ರದ ಶಾಸಕರಾದ ಟಿ.ಎಸ್.ಶ್ರೀವತ್ಸ ಅವರು ಅಧ್ಯಕ್ಷತೆ ವಹಿಸಿದ್ದರು. ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ದೀಪಾಲಂಕಾರವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ, ಮಹಾಪೌರರಾದ ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ್ ತಂಗಡಗಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಮತ್ತು ತನ್ವೀರ್ ಸೇಠ್ ಸೇರಿ ಹಲವು ಶಾಸಕರು ಉಪಸ್ಥಿತರಿದ್ದರು.
ʼಡಾ.ಪದ್ಮಾಮೂರ್ತಿ ಕಲಾ ಸೇವೆ ಅಪೂರ್ವʼ
ಡಾ.ಪದ್ಮಾಮೂರ್ತಿ ಅವರ ಕಲಾ ಸೇವೆ ಅಪೂರ್ವವಾದದ್ದು. ಅಂತಾರಾಷ್ಟ್ರೀಯ ಮಟ್ಟದ ಕಲಾವಿದರಾದ ಇವರು ದೀರ್ಘಕಾಲ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇವರನ್ನು ಸರ್ಕಾರ ಗುರುತಿಸಿ ದಸರಾ ಸಂದರ್ಭದಲ್ಲಿ ಸಂಗೀತ ವಿದ್ವಾನ್ ಪ್ರಶಸ್ತಿ ನೀಡಿರುವುದು ಶ್ಲಾಘನೀಯ. 91ರ ವಯಸ್ಸಲ್ಲೂ ಅತ್ಯಂತ ಸ್ಪಷ್ಟ ಧ್ವನಿ ಹೊಂದಿದ್ದಾರೆ ಎಂದು ಮುಖ್ಯಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.