ಬಿ.ಕೆ ಹರಿಪ್ರಸಾದ್ ಅವರ ನಿವಾಸಕ್ಕೆ ಭೇಟಿ ನೀಡಿದ ಪರಮೇಶ್ವರ್, ಸತೀಶ್ ಜಾರಕಿಹೊಳಿ

Update: 2023-09-14 17:01 GMT

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಹೇಳದೇ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದ ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಅವರ ನಿವಾಸಕ್ಕೆ ಗುರುವಾರ ಸಂಜೆ ಗೃಹ ಸಚಿವ ಜಿ. ಪರಮೇಶ್ವರ್‌ ಮತ್ತು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಭೇಟಿ ನೀಡಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ.

ಇತ್ತೀಚೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಈಡಿಗ, ಬಿಲ್ಲವ, ನಾಮಧಾರಿ, ದೀವರು ಮತ್ತು ಅತಿ ಹಿಂದುಳಿದ ವರ್ಗಗಳ ಸಮಾನ ಮನಸ್ಕರ ಸಭೆಯಲ್ಲಿ ಬಿ.ಕೆ ಹರಿಪ್ರಸಾದ್ ಸಿದ್ದರಾಮಯ್ಯ ಅವರ ಹೆಸರು ಹೇಳದೇ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು. ಇದು ಪಕ್ಷದಲ್ಲಿ ಚರ್ಚೆಗೆ ಕಾರಣವಾಗಿತ್ತು. ಪಕ್ಷದ ಹಲವು ನಾಯಕರು ಹರಿಪ್ರಸಾದ್ ಮಾತುಗಳಿಗೆ ಆಕ್ಷೇಪ ವ್ಯಕ್ತಪಡಿಸಿ, ಹೈಕಮಾಂಡ್‌ ಗೆ ದೂರು ನೀಡಿದ್ದರು. ಈ ಬೆನ್ನಲ್ಲೇ ಹರಿಪ್ರಸಾದ್‌‌ ಅವರಿಗೆ ಎಐಸಿಸಿ ಶೋಕಾಸ್‌ ನೋಟಿಸ್ ಕೂಡ ನೀಡಿದೆ. 

ಇದೀಗ ಸಚಿವರಿಬ್ಬರು ಹರಿಪ್ರಸಾದ್ ಅವರ ನಿವಾಸಕ್ಕೆ ಭೇಟಿ ನೀಡಿದ್ದು, ಕುತೂಹಲ ಮೂಡಿಸಿದೆ. 

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಪರಮೇಶ್ವರ್, ʼʼಒಬ್ಬರಿಗೊಬ್ಬರು ಭೇಟಿ ಆಗಬಾರದು ಅಂತ ಇದೆಯಾ? ನಮ್ಮ ಹಿರಿಯ ನಾಯಕರನ್ನು ಭೇಟಿ ಮಾಡಬಾರದು ಅಂತ ಇದೆಯಾ?, ಅನೇಕ ಆಂತರಿಕ ವಿಷಯ ಇರುತ್ತೆ. ಅದೆಲ್ಲಾ ಮಾಧ್ಯಮಕ್ಕೆ ಹೇಳೋದಕ್ಕೆ ಆಗುತ್ತಾ?, ಅವರಿಗೆ ಅಸಮಾಧಾನ ಇದೆ ಅಂತ ಅವರು ನಿಮಗೆ ಹೇಳಿದ್ರಾ? ಅವರು ನಗು ನಗುತ್ತಾ ಇಲ್ವಾʼʼ ಎಂದು ಹೇಳಿದರು. 

 

 

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News