ಪರಶುರಾಮ ಥೀಮ್ ಪಾರ್ಕ್ ಕಾಮಗಾರಿ ತಡೆಗೆ ಕೋರಿಕೆ: ಮುತಾಲಿಕ್ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್‍ನಿಂದ ವಜಾ

Update: 2023-10-11 17:15 GMT

ಬೆಂಗಳೂರು, ಅ.11: ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಬೈಲೂರಿನಲ್ಲಿನ ಪರಶುರಾಮ ಮೂರ್ತಿಯ ಕಾಮಗಾರಿಗೆ ತಡೆ ಕೋರಿ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. ಅಲ್ಲದೆ, ಕಲ್ಪನೆಗಳ ಆಧಾರದಲ್ಲಿ ಅರ್ಜಿ ಹಾಕಲಾಗಿದೆ ಎಂದು ನ್ಯಾಯಪೀಠವು ಅರ್ಜಿದಾರರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.

ಪರಶುರಾಮ ಥೀಮ್ ಪಾರ್ಕ್‍ನ್ನು ಗೋಮಾಳ ಜಮೀನಿನಲ್ಲಿ ನಿರ್ಮಿಸಲಾಗುತ್ತಿದೆ. ಹೀಗಾಗಿ, ಇದಕ್ಕೆ ತಡೆ ನೀಡಬೇಕು ಎಂದು ಪ್ರಮೋದ್ ಮುತಾಲಿಕ್ ಮತ್ತು ಬೆಂಗಳೂರಿನ ಎಸ್.ಭಾಸ್ಕರನ್ ಎಂಬವರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಮತ್ತು ನ್ಯಾ.ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಜಾ ಮಾಡಿದೆ.

ಅರ್ಜಿದಾರರಿಬ್ಬರೂ ಆ ಗ್ರಾಮದವರಲ್ಲ. ಒಬ್ಬರು ಧಾರವಾಡದವರು ಮತ್ತೋರ್ವ ಬೆಂಗಳೂರಿನವರು. ಕಲ್ಪನೆಗಳ ಆಧಾರದಲ್ಲಿ ಈ ಅರ್ಜಿ ಹಾಕಲಾಗಿದೆ. ಮೂರ್ತಿ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಈ ಹಿಂದೆ ಆಕ್ಷೇಪ ಹಾಕದೆ, ಮುಗಿಯುವ ಹಂತದಲ್ಲಿ ತಡವಾಗಿ ಕೋರ್ಟ್‍ಗೆ ಬಂದಿದ್ದಾರೆ ಎಂದು ಪೀಠ ಹೇಳಿದೆ.

ಕಾರ್ಕಳ ತಾಲೂಕಿನ ಬೈಲೂರಿನ ಉಮಿಕಲ್ ಬೆಟ್ಟದಲ್ಲಿ ಪರಶುರಾಮ ಥೀಮ್ ಪಾರ್ಕ್ ನಿರ್ಮಿಸಲಾಗುತ್ತಿದೆ. ಇಲ್ಲಿ 33 ಅಡಿಯ ಪರಶುರಾಮ ಮೂರ್ತಿಯ ಸದ್ಯ ಮುಕ್ತಾಯದ ಹಂತದ ಕಾಮಗಾರಿ ನಡೆಯುತ್ತಿದೆ. ಅರ್ಜಿದಾರರಲ್ಲಿ ಒಬ್ಬರಾದ ಪ್ರಮೋದ್ ಮುತಾಲಿಕ್ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾರ್ಕಳ ಕ್ಷೇತ್ರದಿಂದ ಸ್ಪರ್ಧೆ ನಡೆಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News