ನಿಗಮ-ಮಂಡಳಿ ನೇಮಕಕ್ಕೆ ಪಕ್ಷದ ದಿಲ್ಲಿ ನಾಯಕರ ಭೇಟಿ: ಡಿಸಿಎಂ ಡಿಕೆಶಿ

Update: 2023-12-17 09:23 GMT

ಬೆಂಗಳೂರು, ಡಿ.17: "ನಿಗಮ, ಮಂಡಳಿ ನೇಮಕ ಪಟ್ಟಿಯನ್ನು ನಾವು ನಮ್ಮ ಹೈಕಮಾಂಡ್ ನಾಯಕರಿಗೆ ರವಾನಿಸಿದ್ದು, ಅದಕ್ಕೆ ಅಂಕಿತ ಪಡೆಯಬೇಕಾಗಿದೆ. ಹೀಗಾಗಿ ರಾಜ್ಯದ ನಾಯಕರು ದಿಲ್ಲಿಗೆ ತೆರಳುತ್ತಿದ್ದೇವೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ರವಿವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಉತ್ತರಿಸಿದರು.

"ಪಕ್ಷದ ದಿಲ್ಲಿ ನಾಯಕರು ನಮ್ಮನ್ನು ಕರೆದಿಲ್ಲ. ನಾವೇ ಅಲ್ಲಿಗೆ ಹೋಗುತ್ತಿದ್ದೇವೆ. ಎಐಸಿಸಿ ಅಧ್ಯಕ್ಷರು ನಮ್ಮ ಗ್ಯಾರಂಟಿ ಯೋಜನೆಗಳ ಜಾರಿ, ತಾಲೂಕು ಹಾಗೂ ಜಿಲ್ಲಾ ಮಟ್ಟದ ಪದಾಧಿಕಾರಿಗಳ ನೇಮಕ ಸಂಬಂಧ ನಿರ್ದೇಶನ ನೀಡಿದ್ದಾರೆ. ತಿಂಗಳಲ್ಲಿ ತಾಲೂಕು ಮಟ್ಟದಲ್ಲಿ ಸಮಿತಿ ಮಾಡಲು ಪ್ರಸ್ತಾವ ಸಲ್ಲಿಸಲು ಶಾಸಕರಿಗೆ ಸೂಚಿಸುತ್ತೇವೆ." ಎಂದು ಡಿಸಿಎಂ ತಿಳಿಸಿದರು.

ನಾರಾಯಣ ಗೌಡರ ಭೇಟಿ ವಿಚಾರವಾಗಿ ಕೇಳಿದಾಗ, " ನಾರಾಯಣಗೌಡರು ಕನ್ನಡದಲ್ಲಿ ನಾಮಫಲಕ ಹಾಕಲು ಹೋರಾಟ ಮಾಡುತ್ತಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅವರು ಹೋರಾಟಗಾರರು, ಹೋರಾಟ ಮಾಡುವುದು ಸಹಜ. ಕರ್ನಾಟಕದಲ್ಲಿ ಕನ್ನಡದಲ್ಲಿ ನಾಮಫಲಕ ಹಾಕುವಂತೆ ಆದೇಶ ಇದೆ. ಯಾರೋ ಅವರ ವಿರುದ್ಧ ದೂರು ನೀಡಿದ್ದಾರೆ. ಈ ಬಗ್ಗೆ ನಾನು ಪೊಲೀಸ್ ಆಯುಕ್ತರ ಜೊತೆ ಮಾತನಾಡಿದ್ದೇನೆ. ಹೋರಾಟಗಾರರಿಗೆ ನಾವು ಎಷ್ಟು ಗೌರವ ನೀಡಬೇಕೋ ಅದನ್ನು ನೀಡಲೇಬೇಕು. ಅವರುಗಳ ಹೋರಾಟದಿಂದ ಕನ್ನಡ ಉಳಿಯುತ್ತಿದೆ. ಅವರಿಗೆ ರಾಜಕೀಯ ಬೇಡ. ಅವರ ವಿರುದ್ಧ ಸುಳ್ಳು ಕೇಸು ದಾಖಲಿಸಬಾರದು ಎಂದು ಆಯುಕ್ತರಿಗೆ ಹೇಳಿದ್ದೇನೆ" ಎಂದು ತಿಳಿಸಿದರು.

ನಿಗಮ ಮಂಡಳಿ ನೇಮಕಕ್ಕೆ ಪಕ್ಷದ ದಿಲ್ಲಿ ನಾಯಕರ ಭೇಟಿ: ಡಿಸಿಎಂ ಡಿಕೆಶಿ

ಸಂಸತ್ ಭದ್ರತಾ ವೈಫಲ್ಯ ಪ್ರಕರಣದಲ್ಲಿ ಪ್ರತಾಪ್ ಸಿಂಹ ಅವರನ್ನು ಟ್ರ್ಯಾಪ್ ಮಾಡಲಾಗುತ್ತಿದೆಯೇ ಎಂದು ಕೇಳಿದ ಪ್ರಶ್ನೆಗೆ, "ಅವರನ್ನು ಯಾರು ಟ್ರ್ಯಾಪ್ ಮಾಡುತ್ತಾರೆ? ಪ್ರತಾಪ್ ಸಿಂಹ ಅವರೇನೂ ಸಣ್ಣ ಹುಡುಗನಲ್ಲ, ನಾನೂ ಹುಡುಗನಲ್ಲ. ಇದು ನಮ್ಮ ಜವಾಬ್ದಾರಿ ಅಷ್ಟೇ" ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News