ಪಿಡಿಒಗಳು ಶಾಸಕರಿಗಿಂತ ಉನ್ನತ ದರ್ಜೆಯವರಂತೆ ವರ್ತಿಸುತ್ತಿದ್ದಾರೆ: ಸಚಿವ ಪ್ರಿಯಾಂಕ್ ಖರ್ಗೆ ಅಸಮಾಧಾನ

Update: 2023-08-20 15:02 GMT

ಬೆಂಗಳೂರು, ಆ.20: ‘ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿ ಕೆಲಸ ಮಾಡುತ್ತಿರುವ ಪಿಡಿಒಗಳು ಶಾಸಕರಿಗಿಂತ ಉನ್ನತ ದರ್ಜೆಯವರಂತೆ ವರ್ತನೆ ಮಾಡುತ್ತಿದ್ದಾರೆ. ವ್ಯವಸ್ಥೆ ತುಂಬಾ ಹದಗೆಟ್ಟಿದೆ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. 

ರವಿವಾರ ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಆಯೋಜಿಸಿದ್ದ ಚಿಂತನಾ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದ ಗ್ರಾಮ ಪಂಚಾಯತ್‍ಗಳಲ್ಲಿ ಸಮರ್ಪಕವಾಗಿ ತೆರಿಗೆಯನ್ನು ಸಂಗ್ರಹಿಸುತ್ತಿಲ್ಲ. ಒಂದು ವೇಳೆ ಸಮರ್ಪಕವಾಗಿ ತೆರಿಗೆಯನ್ನು ಸಂಗ್ರಹಿಸಿದ್ದಲ್ಲಿ, 3ಸಾವಿರ ಕೋಟಿ ರೂ. ರಾಜ್ಯ ಸರಕಾರಕ್ಕೆ ಬರುತ್ತದೆ. ಪಂಚಾಯಿತಿಗಳಲ್ಲಿ ಭ್ರಷ್ಟಾಚಾರವನ್ನು ತಡೆಯುವ ಸಲುವಾಗಿ ಪಂಚತಂತ್ರ-2 ತಂತ್ರಾಂಶವನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದರು.

ಪಂಚತಂತ್ರ-2ನಲ್ಲಿ ಸಭೆಯ ನಡಾವಳಿ, ಯೋಜನೆಗಳು, ಪಿಡಿಒಗಳ ವಿವರ ಸೇರಿ ಎಲ್ಲವನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗುತ್ತದೆ. ಪಂಚಾಯಿತಿಗಳಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕಾಗಿದೆ. ಅದಕ್ಕೆ ಸ್ವಲ್ಪ ಕಾಲಾವಕಾಶ ಬೇಕಾಗಿದೆ. ಬಾಪೂಜಿ ಕೇಂದ್ರಗಳಲ್ಲಿಯೂ ಪಾರದರ್ಶಕತೆಯನ್ನು ತರಲಾಗುತ್ತದೆ ಎಂದು ಅವರು ತಿಳಿಸಿದರು.

ಬೆಂಗಳೂರು ಹೊರತುಪಡಿಸಿ ಗ್ರಾಮೀಣ ಪ್ರದೇಶಗಳಲ್ಲಿಯೂ ನಾವು ಉತ್ತಮ ವಾತವರಣವನ್ನು ನಿರ್ಮಾಣ ಮಾಡಬೇಕಾಗಿದೆ. ನಮ್ಮ ರಾಜ್ಯವು ವಿಭಿನ್ನತೆಯಿಂದ ಕೂಡಿದ್ದು, ಎಲ್ಲ ಪ್ರದೇಶಗಳಲ್ಲಿ ಆಯಾ ಪರಿಸರಕ್ಕೆ ಅನುಗುಣವಾಗಿ ಅಭಿವೃದ್ಧಿಯನ್ನು ಮಾಡಬಹುದಾಗಿದೆ. ರಾಷ್ಟ್ರಕ್ಕೆ ಮಾದರಿಯಾಗುವ ಉಧ್ಯಮಶೀಲತೆಯನ್ನು ನಮ್ಮ ಸರಕಾರ ರಾಜ್ಯದಲ್ಲಿ ಅನುಷ್ಠಾನ ಮಾಡಲಿದೆ ಎಂದು ಅವರು ಹೇಳಿದರು.

ದುಡಿಯುವ ಮಹಿಳೆಯರಿಗೆ ಉಪಯುಕ್ತವಾಗಲೆಂದು ದುಡಿಯುವ ಸ್ಥಳದಲ್ಲಿಯೇ ಕೂಸಿನ ಮನೆಗಳನ್ನು ತೆರೆಯಲಾಗುತ್ತದೆ. ಇದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿಯಲ್ಲಿ ಜಾರಿ ಮಾಡಲಾಗುತ್ತದೆ ಎಂದು ಅವರು ಹೇಳಿದರು.

ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ದೇಶದಲ್ಲಿ ಕನಿಷ್ಠ ಬೆಂಬಲ ಬೆಲೆ ಜಾರಿಯಾಗುವವರೆಗೂ ಹೋರಾಟವನ್ನು ಮಾಡುತ್ತೇವೆ ಎಂದು ಹೇಳಿದರು.

ರಾಜಕೀಯ ವಿಶ್ಲೇಷಕ ಡಾ.ಬಿ.ಸಿ.ಬಸವರಾಜು ಮಾತನಾಡಿ, ಮಾಧ್ಯಮಗಳು ಗ್ಯಾರೆಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಬಿಂಬಿಸುತ್ತಿವೆ. ದೇಶದ ಪ್ರಧಾನಿ ಮೋದಿ ಅವರು ಇದನ್ನೇ ಹೇಳಿದ್ದಾರೆ. ಆದರೆ ಕಾಂಗ್ರೆಸ್ ಸರಕಾರ ಕರ್ನಾಟಕದಲ್ಲಿ ಗ್ಯಾರೆಂಟಿ ಯೋಜನೆಗಳನ್ನು ಜಾರಿ ಮಾಡಿದ ಒಂದು ವಾರದಲ್ಲೇ ಬಿಜೆಪಿ ಆಡಳಿತ ಮಧ್ಯಪ್ರದೇಶದಲ್ಲಿ ಇಂತಹ ಕರ್ನಾಟಕ ಸರಕಾರದ ಗ್ಯಾರೆಂಟಿಯನ್ನು ಹೋಲುವ ಮತ್ತೊಂದು ಯೋಜನೆಗೆ ಚಾಲನೆ ನೀಡಿದ್ದಾರೆ ಎಂದು ಟೀಕಿಸಿದರು.

ಮೋಹಾನ್ ದಾಸ್ ಪೈ ನಮ್ಮ ತೆರಿಗೆ ಹಣವು ದೇಶದ ಅಭಿವೃದ್ಧಿಗೆ ಇರುವುದು ಹೊರತಾಗಿ, ಗ್ಯಾರೆಂಟಿ ಯೋಜನೆಗಳ ಅನುಷ್ಟಾನಕ್ಕೆ ಅಲ್ಲ ಎಂದು ಟ್ವೀಟರ್ ಅಭಿಯಾನವನ್ನೂ ನಡೆಸಿದ್ದರು. ಇದೆಲ್ಲದರ ನಡುವೆಯೂ ಸರಕಾರ ಬಹುಸಂಖ್ಯಾತ ಬಡವರ ಕೈಗೆ ಹಣ ಬರುವ ಹಾಗೆ ಮಾಡಿದೆ. ಆ ಮೂಲಕ ಜನರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಿದೆ ಎಂದು ಅವರು ಹೇಳಿದರು.

ಈ ದೇಶದಲ್ಲಿ ಬಡವರ ಆದಾಯ ಕಡಿಮೆ ಆಗಿದೆ. ಗ್ರಾಮೀಣ ಪ್ರದೇಶದಲ್ಲಿಯೂ ಕಡಿಮೆ ಇದೆ. ಮಧ್ಯಮ ವರ್ಗದವರ ಸಂಪಾದನೆ ಕಡಿಮೆ ಆಗುತ್ತಿದೆ. ಶ್ರೀಮಂತ್ರರ ಆದಾಯ ಹೆಚ್ಚಾಗಿದೆ. ಆಗಾಗಿ ದುಬಾರಿ ಕಾರು, ಮೊಬೈಲ್‍ಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ಮಧ್ಯಮ ವರ್ಗದವರು ಕೊಳ್ಳುವ ವಸ್ತುಗಳ ಮಾರಾಟ ಕುಸಿತವಾಗಿದೆ ಎಂದು ಅವರು ವಿವರಿಸಿದರು.

ನಮ್ಮ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದ ಪಾಲಿಸಿಗಳು ಶ್ರೀಮಂತರ ಪರವಾಗಿದೆ. ಹಾಗಾಗಿ ಕೋವಿಡ್‍ನಿಂದ ದೇಶದ ಜಿಡಿಪಿ ಕುಸಿತವಾದರೂ, ಶ್ರೀಮಂತರ ಆದಾಯ ಹೆಚ್ಚಾಗಿದೆ. ನಿಜವಾದ ಬಿಟ್ಟಿ ಭಾಗ್ಯಗಳನ್ನು ಈ ದೇಶದ ಶ್ರೀಮಂತರು ಪಡೆದುಕೊಂಡಿದ್ದಾರೆ. ಕಾರ್ಪೊರೇಟ್ ಕಂಪನಿಗಳು ಸರಕಾರದಿಂದ ಹಣವನ್ನು ಪಡೆದುಕೊಂಡಿವೆ ಎಂದು ಡಾ. ಬಿ.ಸಿ. ಬಸವರಾಜು ಹೇಳಿದರು.

ಬಡವರ ಆದಾಯ ಕಡಿಮೆ ಇದ್ದಾಗ ಸರಕಾರವೇ ಹಣವನ್ನು ನೀಡಬೇಕಾಗುತ್ತದೆ. ಗ್ಯಾರೆಂಟಿ ಯೋಜನೆಯಿಂದ ಬರುವ ಹಣವನ್ನು ಜನರು ಕೂಡಿಡುವುದಿಲ್ಲ, ಖರ್ಚು ಮಾಡುತ್ತಾರೆ. ಹಾಗಾಗಿ ಅಭಿವೃದ್ಧಿ ಆಗುತ್ತದೆ. ಸರಕಾರ ಈ ಗ್ಯಾರೆಂಟಿಗಳನ್ನು ಅನುಷ್ಠಾನ ಮಾಡುವಾಗ ಜನರ ಮೇಲೆ ತೆರಿಗೆಯನ್ನು ಹಾಕಬಾರದು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಸಂಸ್ಕೃತಿ ಚಿಂತಕ ಪ್ರೊ.ರೆಹಮತ್ ತೆರೀಕರೆ, ಕೆ.ಪಿ.ಲಕ್ಷ್ಮಣ್, ಡಾ.ಸಬೀಹಾ ಭೂಮಿಗೌಡ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News