ಟ್ವಿಟರ್ ಸಂಸ್ಥೆ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್; 50 ಲಕ್ಷ ರೂ. ದಂಡ

Update: 2023-06-30 18:43 GMT

ಬೆಂಗಳೂರು, ಜೂ.30: ‘ಟ್ವಿಟರ್ ಸಂಸ್ಥೆಯು ಹೈಕೋರ್ಟ್‍ಗೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದಲ್ಲದೆ, ಸಂಸ್ಥೆಗೆ 50ಲಕ್ಷ ರೂ.ದಂಡವನ್ನು ವಿಧಿಸಿದೆ. ಟ್ವಿಟರ್ 45 ದಿನಗಳಲ್ಲಿ ದಂಡವನ್ನು ಪಾವತಿಸದಿದ್ದಲ್ಲಿ, ಪ್ರತಿದಿನ ಹೆಚ್ಚುವರಿಯಾಗಿ 5 ಸಾವಿರ ರೂ. ಪಾವತಿಸಬೇಕು’ ಎಂದು ಹೈಕೋರ್ಟ್ ಆದೇಶಿಸಿದೆ.

ವ್ಯಕ್ತಿಗತವಾಗಿ ಖಾತೆಗಳನ್ನು ನಿಷೇಧಿಸುವಂತೆ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಜಾರಿ ಮಾಡಿರುವ ನಿಬರ್ಂಧ ಆದೇಶಗಳನ್ನು ಪ್ರಶ್ನಿಸಿ, ಟ್ವಿಟರ್ ಸಂಸ್ಥೆಯು ಹೈಕೋರ್ಟ್‍ನಲ್ಲಿ ಅರ್ಜಿಗಳನ್ನು ಸಲ್ಲಿಸಿತ್ತು. ಎ.21ರಂದು ಅರ್ಜಿಗಳ ವಿಚಾರಣೆಯನ್ನು ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ನೇತೃತ್ವದ ಏಕಸದಸ್ಯ ಪೀಠವು ಶುಕ್ರವಾರ ಪ್ರಕಟಿಸಿದೆ.

ಈ ಕುರಿತು ವಿದೇಶದ ಕಾನೂನುಗಳನ್ನು ಪರಿಶೀಲಿಸಿದ್ದು, ಅವುಗಳನ್ನು ಹೋಲಿಕೆ ಮಾಡಲಾಗಿದೆ. ಪ್ರತಿವಾದಿಗಳ ವಾದದಲ್ಲಿ ನಂಬಿಕೆ ಬಂದಿದೆ. ಆದೇಶ ಪಾಲಿಸದೇ ಇದ್ದಕ್ಕಿದ್ದಂತೇ ಟ್ವಿಟರ್ ನ್ಯಾಯಾಲಯದ ಕದ ತಟ್ಟಿದೆ. ಟ್ವಿಟರ್ ಬಿಲಿಯನ್ ಡಾಲರ್ ಕಂಪೆನಿಯಾಗಿದ್ದು, ರೈತರು, ಕಾರ್ಮಿಕರಂತಲ್ಲ ಎಂದು ಪೀಠವು ಮೌಖಿಕವಾಗಿ ಹೇಳಿದೆ.

ಟ್ವಿಟರ್ ಸಂಸ್ಥೆಯ ಅರ್ಜಿಗಳು ಅನೂರ್ಜಿತಗೊಂಡಿದ್ದು, ಸಂಸ್ಥೆಯು 50 ಲಕ್ಷ ರೂ.ಗಳನ್ನು 45 ದಿನಗಳ ಒಳಗೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ದಂಡವಾಗಿ ಪಾವತಿಸಬೇಕು. ನಿಗಧಿತ ಕಾಲಾವಧಿಯ ಬಳಿಕ ಪ್ರತಿದಿನ ಹೆಚ್ಚುವರಿಯಾಗಿ 5 ಸಾವಿರ ರೂ. ಪಾವತಿಸಬೇಕು ಎಂದು ನ್ಯಾಯಾಲಯವು ಆದೇಶದಲ್ಲಿ ಉಲ್ಲೇಖಿಸಿದೆ.

‘ಸುಳ್ಳು ಸುದ್ದಿ ಮತ್ತು ಉದ್ದೇಶಪೂರ್ವಕ ಅಸಂಬದ್ಧ ಮಾಹಿತಿ ಹಂಚಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಟ್ವಿಟರ್‍ನಂಥ ವೇದಿಕೆಗಳು ಪರಿಣಾಮಕಾರಿ ಕ್ರಮಕೈಗೊಳ್ಳುತ್ತಿಲ್ಲ. ದೇಶದ ಸಮಗ್ರತೆ ಮತ್ತು ಸಾರ್ವಭೌಮತೆ, ರಾಷ್ಟ್ರೀಯ ಹಿತಾಸಕ್ತಿ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ತಪ್ಪು ಮಾಹಿತಿಯು ಹೆಚ್ಚಳವಾಗುತ್ತಿದೆ ಎಂದು’ ಟ್ವಿಟರ್ ಅರ್ಜಿಯನ್ನು ವಿರೋಧಿಸಿದ ಕೇಂದ್ರ ಸರಕಾರದ ಪರ ವಕೀಲರು ವಾದಿಸಿದ್ದರು.

‘ಸೂಕ್ಷ್ಮ ವಿಚಾರಗಳು ಹಾಗೂ ನ್ಯಾಯಾಂಗಕ್ಕೆ ಸಂಬಂಧಿಸಿದಂತೆ ಟ್ವಿಟರ್‍ನಲ್ಲಿ ಅಭಿಪ್ರಾಯ ಹಂಚಿಕೊಳ್ಳಲಾಗುತ್ತದೆ. ನ್ಯಾಯಸಮ್ಮತ ಅಭಿಪ್ರಾಯಕ್ಕೆ ಪ್ರಜಾಪ್ರಭುತ್ವದಲ್ಲಿ ಒಪ್ಪಿಗೆ ಇದ್ದರೂ ವ್ಯಂಗ್ಯದ ರೂಪದಲ್ಲಿನ ಟ್ವೀಟ್‍ಗಳು ಮತ್ತು ಮಾಹಿತಿಗಳು ಟ್ವಿಟರ್‍ನಲ್ಲಿ ವ್ಯಾಪಕವಾಗಿವೆ. ಇತರೆ ಸಾಮಾಜಿಕ ಮಾಧ್ಯಮಗಳಿಗೆ ಹೋಲಿಕೆ ಮಾಡಿದರೆ ಸೀಮಿತ ಪದ ಮಿತಿ ಹೊಂದಿರುವ ಟ್ವಿಟರ್ ವ್ಯಾಪಕವಾಗಿ ತಪ್ಪು ಮಾಹಿತಿ ಪಸರಿಸಿರುವ ಶಕ್ತಿ ಹೊಂದಿದೆ’ ಎಂದು ಕೇಂದ್ರ ಸರಕಾರದ ಪರ ವಕೀಲರು ತಿಳಿಸಿದ್ದರು.

ಟ್ವಿಟರ್ ಪರ ವಕೀಲರು ‘ಟ್ವಿಟರ್ ನಲ್ಲಿ ವ್ಯಕ್ತಿಗತವಾಗಿ ಹೊಂದಿರುವ ಸಾವಿರಾರು ಖಾತೆಗಳನ್ನು ನಿಬರ್ಂಧಿಸುವಂತೆ ಕೇಂದ್ರ ಸರಕಾರ ಆದೇಶ ಮಾಡಿದೆ. ಕಾನೂನಿನ ಅನ್ವಯ ನಾವು ಸರಕಾರದ ಆದೇಶವನ್ನು ಪಾಲಿಸಬೇಕಿದೆ. ಆದರೆ, ತಮ್ಮ ಟ್ವಿಟರ್ ಹ್ಯಾಂಡಲ್ ನಿಬರ್ಂಧವಾದುದ್ದಕ್ಕೆ ವ್ಯಕ್ತಿಗತವಾಗಿ ಬಳಕೆದಾರರಿಗೆ ಯಾವುದೇ ಪರಿಹಾರ ಇರುವುದಿಲ್ಲ. ಇದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವಾಗಿದೆ ಎಂದು ವಾದಿಸಿದ್ದರು.

‘ನಿಬರ್ಂಧ ಆದೇಶ ಮತ್ತು ಜಾರಿಯು ಗೌಪ್ಯವಾಗಿರಬೇಕು ಎಂದು ಹೇಳಲಾಗಿರುವುದರಿಂದ ನಾವು ಅದನ್ನು ಬಹಿರಂಗಪಡಿಸಿಲ್ಲ. ಈ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದೇವೆ. 1000ಕ್ಕೂ ಅಧಿಕ ಟ್ವಿಟರ್ ಖಾತೆಗಳನ್ನು ನಿಬರ್ಂಧಿಸುವಂತೆ ಸರಕಾರ ಆದೇಶ ಮಾಡಿದೆ. ಆದರೆ ಇದಕ್ಕೆ ಯಾವುದೇ ಸಕಾರಣ ನೀಡಿಲ್ಲ’ ಎಂದು ಟ್ವಿಟರ್ ಸಂಸ್ಥೆಯ ಪರ ವಕೀಲರು ವಾದಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News