ಉಚಿತ ಬಸ್ ಪ್ರಯಾಣದ ‘ಶಕ್ತಿ ಯೋಜನೆ’ ಪ್ರಶ್ನಿಸಿ ವಿದ್ಯಾರ್ಥಿಗಳ ಅರ್ಜಿ: ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್
ಬೆಂಗಳೂರು, ಆ.31: ಅಧ್ಯಯನ ನಡೆಸದೆ ರಾಜ್ಯ ಸರಕಾರದ ಮಹಾತ್ವಾಕಾಂಕ್ಷೆಯ ಯೋಜನೆಯಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೇವೆ(ಶಕ್ತಿ ಯೋಜನೆ)ಯನ್ನು ಪ್ರಶ್ನಿಸಿದ್ದ ಕಾನೂನು ವಿದ್ಯಾರ್ಥಿ ಕ್ರಮಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಕಾನೂನು ವಿದ್ಯಾರ್ಥಿಗಳಾದ ಬೆಂಗಳೂರಿನ ಅಶ್ವಿನಿ ಶಂಕರ್ ಭಟ್, ನೇಹಾ ವೆಂಕಟೇಶ್ ಮತ್ತು ಮುಂಬೈನ ಯಾಶಿಕಾ ಸರವಣ ಸೇರಿ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಮತ್ತು ನ್ಯಾಯಮೂರ್ತಿ ಎಂಜೆಎಸ್ ಕಮಲ್ ಅವರಿದ್ದ ನ್ಯಾಯಪೀಠ, ಅರ್ಜಿಯನ್ನು ಹಿಂಪಡೆಯಲು ವಿದ್ಯಾರ್ಥಿಗಳಿಗೆ ಅನುಮತಿ ನೀಡಿತು.
ಇದಕ್ಕೂ ಮುನ್ನ ವಿಚಾರಣೆ ವೇಳೆ, ಈ ಶಕ್ತಿ ಯೋಜನೆ ಜಾರಿಗೂ ಮುನ್ನ ಸಂಚಾರ ವ್ಯವಸ್ಥೆ ಸುಗಮವಾಗಿತ್ತೇ?. ಈ ಯೋಜನೆಯಿಂದಾಗಿಯೇ ಬಸ್‍ಗಳಲ್ಲಿ ದಟ್ಟಣೆ ಉಂಟಾಗಿದೆಯೇ?. ಯಾವ ಮಾರ್ಗಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದೆ?. ಸಾರ್ವಜನಿಕ ಬಸ್‍ಗಳಲ್ಲಿ ಇಷ್ಟೇ ಜನರಿರಬೇಕೆಂಬ ನಿಯಮ ಜಾರಿಯಾಗಿದೆಯೇ? ಎಂದು ನ್ಯಾಯಪೀಠ ವಿವರಣೆ ಕೇಳಿತು.
ಅಷ್ಟೇ ಅಲ್ಲದೆ, ಅರ್ಜಿಗೆ ಮೊದಲು ಸಾರಿಗೆ ನಿಯಮಗಳ ಕುರಿತು ಯಾವ ಕಾರಣಕ್ಕಾಗಿ ಅಧ್ಯಯನ ನಡೆಸಿಲ್ಲ. ಯೋಜನೆಯನ್ನು ಪ್ರಶ್ನಿಸುತ್ತಿದ್ದೀರಿ ಸರಿ, ವಾಹನ ದಟ್ಟಣೆಗೆ ಪರಿಹಾರ ಕೋರಿದ್ದೀರಾ? ಎಂದು ಪ್ರಶ್ನಿಸಿತು.
ಅಲ್ಲದೆ, ಮುಂಬೈ ಲೋಕಲ್ ರೈಲುಗಳ ದಟ್ಟಣೆ ಅರಿವಿದೆಯೇ ಎಂದು ಪ್ರಶ್ನೆ ಮಾಡಿತು. ಇದಕ್ಕೆ ಅರ್ಜಿದಾರರ ಪರ ವಕೀಲರು ಸೂಕ್ತ ವಿವರಣೆ ನೀಡಲಾಗಿಲ್ಲ. ಜತೆಗೆ ಅರ್ಜಿ ಹಿಂಪಡೆಯುವುದಾಗಿ ತಿಳಿಸಿದರು. ಇದಕ್ಕೆ ನ್ಯಾಯಪೀಠ ಅನುಮತಿ ನೀಡಿತು.
ಅರ್ಜಿಯಲ್ಲಿ ಏನಿದೆ?: ‘ಶಕ್ತಿ ಯೋಜನೆ’ ಜಾರಿಗೆ ಬಂದಾಗಿನಿಂದ ಬಸ್‍ಗಳಲ್ಲಿ ಜನದಟ್ಟಣೆ ಹೆಚ್ಚಾಗಿದೆ. ಸೀಟು ಪಡೆಯಲು ಗಲಾಟೆ, ಹೊಡೆದಾಟ ಸಂಭವಿಸಿವೆ. ಹಿರಿಯ ನಾಗರಿಕರು, ಮಕ್ಕಳು ಬಸ್ ಹತ್ತಲು ಆಗುತ್ತಿಲ್ಲ. ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ಶಾಲಾ-ಕಾಲೇಜು ತಲುಪಲು ಆಗುತ್ತಿಲ್ಲ. ಇದರಿಂದಾಗಿ ಬಸ್ ಹಾಗೂ ಬಸ್ ನಿಲ್ದಾಣಗಳಲ್ಲಿ ಅನುಚಿತ ವರ್ತನೆ, ಅಹಿತಕರ ಘಟನೆಗಳು ನಡೆಯುತ್ತಿವೆ. ಬಸ್ ನಿಲ್ದಾಣ ಮತ್ತು ಸರಕಾರಿ ಬಸ್‍ಗಳು ಯುದ್ಧ ಭೂಮಿ, ಮೀನು ಮಾರುಕಟ್ಟೆ ಆಗಿವೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
‘ಯೋಜನೆ ಜಾರಿಗೆ ಬಂದಾಗಿನಿಂದ ಮೂರು ಕೋಟಿ ಮಹಿಳೆಯರು ಉಚಿತವಾಗಿ ಬಸ್‍ಗಳಲ್ಲಿ ಪ್ರಯಾಣ ಮಾಡಿದ್ದಾರೆ. ಇದರಿಂದ ತೆರಿಗೆದಾರರ 100 ಕೋಟಿ ರೂ.ನಷ್ಟು ಮೊತ್ತದ ಹಣ ಸರಕಾರಕ್ಕೆ ಪ್ರತಿ ವಾರ ನಷ್ಟವಾಗುತ್ತಿದೆ’ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.