ಬಿಜೆಪಿ ಅವಧಿಯಲ್ಲಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೆಚ್ಚಳ ಮಾಡದ ಕಾರಣ ಸಮಸ್ಯೆ ಉಂಟಾಗಿದೆ: ಡಿಸಿಎಂ ಡಿ.ಕೆ.ಶಿವಕುಮಾರ್

Update: 2023-10-19 08:50 GMT

ಬೆಳಗಾವಿ: ಹಿಂದಿನ ಸರ್ಕಾರದಲ್ಲಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೆಚ್ಚಳ ಮಾಡಿಲ್ಲ. ಪ್ರಸ್ತುತ ಈ ಸಾಮರ್ಥ್ಯವನ್ನು ಹೆಚ್ಚಳ ಮಾಡುವ ಕುರಿತು ಯೋಜನೆ ರೂಪಿಸುತ್ತಿದ್ದೇವೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಬೆಳಗಾವಿಯ ಸರ್ಕಿಟ್ ಹೌಸ್‌ನ ಬಳಿ ಮಾಧ್ಯಮಗಳಿಗೆ ಗುರುವಾರ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಅವರ ವೈಫಲ್ಯಗಳ ಬಗ್ಗೆ ಚರ್ಚೆ ಮಾಡಲು ಹೋಗುವುದಿಲ್ಲ. 2013- 18 ರ ನಮ್ಮ ಸರ್ಕಾರದಲ್ಲಿ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಳ ಮಾಡಿದ್ದೆವು. ಬಿಜೆಪಿ ಅವಧಿಯಲ್ಲಿ ಹೆಚ್ಚಳ ಮಾಡದ ಕಾರಣ ಸಮಸ್ಯೆ ಉಂಟಾಗಿದೆ. ಅಧಿಕಾರಕ್ಕೆ ಬಂದ ಮೊದಲನೇ ದಿನದಿಂದಲೇ ಕಾರ್ಯಪ್ರವೃತ್ತರಾಗಿ ಇಂಧನ ಸಚಿವರಾದ ಜಾರ್ಜ್ ಅವರೊಟ್ಟಿಗೆ ಪಾವಗಡ ಸೋಲಾರ್ ಪಾರ್ಕ್‌ಗೆ ಬೇಟಿ ನೀಡಿ ಪರಿಶೀಲನೆ ಮಾಡಿದೆವು. ಈಗ ನೂತನ ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಯೋಜನೆ ರೂಪಿಸುತ್ತಿದ್ದೇವೆ ಎಂದರು

"ಈ ಬಾರಿ ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಒಂದು ದಿನ ಮಳೆ ಬೀಳದೆ ಇದ್ದರೆ ಸರ್ಕಾರಕ್ಕೆ 1,000 ಕೋಟಿ ನಷ್ಟ ಉಂಟಾಗುತ್ತದೆ. ನಾವು ಈಗ ವಿದ್ಯುತನ್ನು ಪ್ರತಿ ಯೂನಿಟ್ ಗೆ 6- 7 ರೂಪಾಯಿಗೆ ಖರೀದಿ ಮಾಡಿ, ರೈತರಿಗೆ ಕಡಿಮೆ ದರದಲ್ಲಿ ನೀಡುತ್ತಿದ್ದೇವೆ. ಮಿಕ್ಕ ಹಣವನ್ನು ಸರ್ಕಾರ ತುಂಬಲಿದೆ. ಇನ್ನು ಈ ಭಾಗದಲ್ಲಿ ಕೆಲವರು ಕಾಲುವೆಗೆ ಪಂಪ್‌ ಹಾಕಿ ನೀರು ಎತ್ತುತ್ತಿರುವ ಕಾರಣ ಕಾಲುವೆಯ ನೀರು ಕೊನೆಯ ಭಾಗದ ರೈತರಿಗೆ ಸರಿಯಾಗಿ ಮುಟ್ಟುತ್ತಿಲ್ಲ. ಅದಕ್ಕೆ ಅನೇಕ ರೈತರು 10- 15 ಕಿಮೀ ದೂರ ನೀರನ್ನು ಪಂಪ್ ಮಾಡುತ್ತಿದ್ದಾರೆ‌. ಆದ ಕಾರಣ ನೀರು ಬಳಕೆದಾರರ ಸಂಘಗಳ ಬಗ್ಗೆ ಸಭೆ ನಡೆಸಿ, ಅವುಗಳನ್ನು ಪುನರುಜ್ಜೀವನಗೊಳಿಸಬೇಕು ಎಂದು ಸೂಚನೆ ನೀಡಿದ್ದೇನೆ ಎಮದು

"ಎತ್ತಿನಹೊಳೆಯಿಂದ ನೀರು ತರುತ್ತಿದ್ದು, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬೆಂಗಳೂರು ಎಲ್ಲಾ ಭಾಗಕ್ಕೂ ನೀರು ತಲುಪಬೇಕು ಎಂದರೆ ಮಧ್ಯದಲ್ಲಿ ಪಂಪ್ ಹಾಕಿ ನೀರು ಬಳಸುವುದನ್ನು ತಪ್ಪಿಸಬೇಕು. ಇದಕ್ಕೆ ಸೂಕ್ತ ಕಾನೂನು ತರಬೇಕು. ಇನ್ನು ವಾಲ್ಮಿ ತರಬೇತಿಗೆ ಧಾರವಾಡಕ್ಕೆ ಹೋಗಬೇಕಾಗಿದೆ. ರಾಜ್ಯದ ಆಯಾ ಭಾಗಗಳಲ್ಲಿ ವಾಲ್ಮಿ ತರಬೇತಿ ಕೇಂದ್ರಗಳನ್ನು ಆರಂಭಿಸಿ ಅಲ್ಲೇ ತರಬೇತಿ ನೀಡುವ ಬಗ್ಗೆ ಚರ್ಚೆ ನಡೆಸಿದ್ದೇನೆ. ಅತ್ಯಂತ ದಕ್ಷ ಅಧಿಕಾರಿಗಳು ಈ ಭಾಗದಲ್ಲಿ ಇದ್ದಾರೆ. ಅವರುಗಳೇ ರೈತರ ಸಮಸ್ಯೆಗಳನ್ನು ನನ್ನ ಗಮನಕ್ಕೆ ತಂದರು. ಅವರಿಗೆ ರೈತರ ಬಗ್ಗೆ ಹೆಚ್ಚು ಕಾಳಜಿಯಿದೆ. ಆದ ಕಾರಣ ಕಾಲುವೆಯಿಂದ ನೀರು ತೆಗೆಯುವವರಿಗೆ ಇಂತಿಷ್ಟು ಶುಲ್ಕ ಎಂದು ವಿಧಿಸುವ ಮಹಾರಾಷ್ಟ್ರ ಮಾದರಿ ಅಧ್ಯಯನ ಮಾಡಲು ಸೂಚನೆ ನೀಡಿದ್ದೇನೆ ಎಂದರು.

ಪಂಪ್ ಮಾಡಿ ನೀರು ತುಂಬಿಸುವ ಕೆರೆಗಳಲ್ಲಿ ಮೀನುಗಾರಿಕೆ ಮಾಡಲು ಟೆಂಡರ್ ಕರೆಯಬೇಕು ಎಂದು ಸೂಚನೆ ನೀಡಿದ್ದು, ಈ ಕುರಿತು ಮೀನುಗಾರಿಕೆ ಸಚಿವರ ಬಳಿಯೂ ಚರ್ಚೆ ಮಾಡುತ್ತೇನೆ. ಪಂಪ್ ಮಾಡಿ ನೀರು ತುಂಬಿಸಲು ಸಾಕಷ್ಟು ವಿದ್ಯುತ್ ಖರ್ಚಾಗುತ್ತಿದ್ದು, ಅದರ ವೆಚ್ಚವನ್ನು ಈ ಮೂಲಕ ಭರಿಸಲು ನಿರ್ಧರಿಸಿದ್ದೇವೆ. ಬೆಳಗಾವಿ ಭಾಗದಲ್ಲಿ 1,200 ಕೋಟಿ ವಿದ್ಯುತ್ ಬಿಲ್ ಬಾಕಿ ಇದೆ. ಕಾಲುವೆಗೆ ನೀರು ಬಿಡುವಾಗ ಒಂದು ಲೆಕ್ಕ, ಆನಂತರ ಒಂದು ಲೆಕ್ಕ ಸಿಗುತ್ತಿದೆ. ಅದಕ್ಕೆ ಈ ಎಲ್ಲಾ ವಿಚಾರಗಳನ್ನು ಸೇರಿಸಿ ಸಮಗ್ರ ವರದಿ ನೀಡುವಂತೆ ಸೂಚನೆ ನೀಡಿದ್ದೇನೆ. ಒಂದಷ್ಟು ಹೊಸ ಯೋಜನೆಗಳನ್ನು ರೂಪಿಸಲು ಚರ್ಚೆ ನಡೆಸುತ್ತಿದ್ದೇವೆ ಎಂದು ಹೇಳಿದರು.



Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News