ಪ್ರಧಾನಿ, ಸಿಎಂಗಳನ್ನು ನೀಡಿದ ‘ರಾಮನಗರದಲ್ಲಿ ಸಂಕಷ್ಟಗಳ ಸರಮಾಲೆ’: ಶಾಸಕ ಇಕ್ಬಾಲ್ ಹುಸೇನ್

Update: 2023-07-17 17:58 GMT

ಬೆಂಗಳೂರು, ಜು.17: ‘ದೇಶಕ್ಕೆ ಪ್ರಧಾನಿ ಹಾಗೂ ಮುಖ್ಯಮಂತ್ರಿಗಳನ್ನು ನೀಡಿರುವ ರಾಮನಗರ ಕ್ಷೇತ್ರವು ಇಂದಿಗೂ ಮೂಲಭೂತ ಸೌಕರ್ಯಗಳಿಲ್ಲದೆ ಸಂಕಷ್ಟಕ್ಕೆ ಸಿಲುಕಿದೆ. 9 ದಿನಗಳಿಗೊಮ್ಮೆ ನನ್ನ ಕ್ಷೇತ್ರದ ಜನರಿಗೆ ಕುಡಿಯುವ ನೀರು ಸಿಗುತ್ತಿದೆ. ಒಳಚರಂಡಿ ವ್ಯವಸ್ಥೆಯೂ ಇಲ್ಲ’ ಎಂದು ಕಾಂಗ್ರೆಸ್ ಸದಸ್ಯ ಎಚ್.ಎ.ಇಕ್ಬಾಲ್ ಹುಸೇನ್ ಹೇಳಿದರು.

ಸೋಮವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ಡಾ.ಅಶ್ವತ್ಥ ನಾರಾಯಣ, ಪ್ರಧಾನಿ, ಮುಖ್ಯಮಂತ್ರಿಗಳ ಬಗ್ಗೆ ಉಲ್ಲೇಖ ಮಾಡಿದ್ದೀರಾ. ಆದರೆ, ಡಿಸಿಎಂ ಆಗಿದ್ದಾರಲ್ಲ, ಅವರನ್ನು ಸ್ಮರಿಸಿಕೊಳ್ಳಿ ಎಂದರು.

ಇದಕ್ಕೆ ತಿರುಗೇಟು ನೀಡಿದ ಇಕ್ಬಾಲ್ ಹುಸೇನ್, ‘ನೀವು ನಮ್ಮ ಜಿಲ್ಲೆಗೆ ಉಸ್ತುವಾರಿ ಸಚಿವರಾಗಿದ್ರಿ. ಆ ವೇಳೆ ಅನೇಕ ಘಟನೆಗಳು ಜರುಗಿವೆ’ ಎಂದರು. 65-70 ವರ್ಷಗಳಲ್ಲಿ ನಿಮ್ಮನ್ನು ಆಳಿದವರು ಮಾಡದಷ್ಟು ಅಭಿವೃದ್ಧಿಯನ್ನು ನಾವು ಮಾಡಿದ್ದೇವೆ ಎಂದು ಅಶ್ವತ್ಥ ನಾರಾಯಣ ಹೇಳಿದರು.

ಈ ವೇಳೆ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಸದಸ್ಯ ರಂಗನಾಥ್, ಐದು ವರ್ಷಗಳ ಕಾಲ ರಾಮನಗರ ಜಿಲ್ಲೆಗೆ ನಿಮ್ಮ ಕೊಡುಗೆ ಶೂನ್ಯ ಎಂದು ಕಿಚಾಯಿಸಿದರು. ರಾಮನಗರಕ್ಕೆ ಕಾವೇರಿ ನೀರು ನೀಡಲು 450 ಕೋಟಿ ರೂ.ಗಳನ್ನು ಖರ್ಚು ಮಾಡಲು ಯೋಜನೆ ಸಿದ್ಧಪಡಿಸಿದ್ದೆವು. ಜಿಲ್ಲಾ ಆಸ್ಪತ್ರೆ, ವೈದ್ಯಕೀಯ ಕಾಲೇಜು ನಾವು ನೀಡಿದ್ದು. ಈಗ ವೈದ್ಯಕೀಯ ಕಾಲೇಜು ತೆಗೆದುಕೊಂಡು ಹೋಗುತ್ತಿದ್ದಾರೆ. ನಿಮ್ಮ ಕ್ಷೇತ್ರದಲ್ಲಿ ರಕ್ಷಿಸಿಕೊಳ್ಳಿ ಎಂದು ಇಕ್ಬಾಲ್ ಹುಸೇನ್‍ಗೆ ಅಶ್ವತ್ಥ ನಾರಾಯಣ ಹೇಳಿದರು.

ಈ ಸಂದರ್ಭದಲ್ಲಿ ಆಡಳಿತ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಕಳೆದ ಬಾರಿ ರಾಮನಗರದಲ್ಲಿ ಐದು ದಿನ ಸತತ ಮಳೆಯಾಗಿ ರಸ್ತೆ ಜಲಾವೃತಗೊಂಡು, ಭಕ್ತಿ ಕೆರೆ ಒಡೆದು, ತಗ್ಗುಪ್ರದೇಶಗಳು ಜಲಾವೃತಗೊಂಡವು. ಸುಮಾರು 50 ಸಾವಿರ ಜನ ನಿರ್ಗತಿಕರಾದರು. ಆಗ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ, ಕುಮಾರಸ್ವಾಮಿ ಹಾಗೂ ಉಸ್ತುವಾರಿ ಸಚಿವರು ಬಂದು ಪರಿಶೀಲಿಸಿ ಹೋದರು. ಆದರೆ, ಒಂದೇ ಒಂದು ಪೈಸೆಯ ನೆರವು ಜನರಿಗೆ ಸಿಗಲಿಲ್ಲ ಎಂದು ಇಕ್ಬಾಲ್ ಹುಸೇನ್ ಕಿಡಿಗಾರಿದರು.

25 ವರ್ಷಗಳಿಂದ ಒಂದೇ ಒಂದು ಮನೆಯನ್ನು ರಾಮನಗರ ಕ್ಷೇತ್ರಕ್ಕೆ ಕೊಟ್ಟಿಲ್ಲ. ಯಾರದೋ ಪ್ರತಿಷ್ಠೆಗಾಗಿ ರಾಮನಗರದ ಒಳಗೆ ಮತ್ತೊಂದು ತಾಲೂಕು ಘೋಷಣೆ ಮಾಡಿದರು. ಆದರೆ, ತಹಶೀಲ್ದಾರ್ ಬಿಟ್ಟರೆ ಅಲ್ಲಿ ಬೇರೆ ಏನು ಇಲ್ಲ, ಒಬ್ಬ ಅಧಿಕಾರಿಯೂ ಇಲ್ಲ, ಕಚೇರಿಯೂ ಇಲ್ಲ ಎಂದು ಇಕ್ಬಾಲ್ ಹುಸೇನ್ ಹೇಳಿದರು.

ಈ ಸಂದರ್ಭದಲ್ಲಿ ಅಶ್ವತ್ಥ ನಾರಾಯಣ ಹಾಗೂ ಸಚಿವ ಝಮೀರ್ ಅಹ್ಮದ್ ಖಾನ್, ಪ್ರಿಯಾಂಕ್ ಖರ್ಗೆ, ಕಾಂಗ್ರೆಸ್ ಸದಸ್ಯ ರಂಗನಾಥ್ ಸೇರಿದಂತೆ ಇನ್ನಿತರರ ನಡುವೆ ವಾಗ್ವಾದ ನಡೆಯಿತು.

 

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News