‘ಶಕ್ತಿ’ ಯೋಜನೆ, ಮೆಟ್ರೋ ಆದಾಯದ ಬಗ್ಗೆ ಪ್ರಧಾನಿ ಮೋದಿಗೆ ಮಾಹಿತಿ ಕೊರತೆ ಇದೆ : ಡಿಸಿಎಂ ಡಿ.ಕೆ.ಶಿವಕುಮಾರ್

Update: 2024-05-18 13:02 GMT

ಬೆಂಗಳೂರು : ಸಾರಿಗೆ ಬಸ್‍ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವ ‘ಶಕ್ತಿ ಯೋಜನೆ’ಯಿಂದ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹಾಗೂ ಆದಾಯ ಕುಸಿಯುತ್ತಿದೆ ಎಂಬ ಪ್ರಧಾನಿ ಮೋದಿ ಹೇಳಿಕೆ ಆಘಾತ ತಂದಿದೆ. ಮಾಹಿತಿ ಕೊರತೆಯಿಂದ ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ.

ಶನಿವಾರ ಇಲ್ಲಿನ ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಮೆಟ್ರೋ ಆದಾಯ ಹಾಗೂ ʼಶಕ್ತಿʼ ಯೋಜನೆ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪ ಮಾಡಿದ್ದಾರೆ. ಒಂದು ವರ್ಷದಲ್ಲಿ ಮೆಟ್ರೋ 130ಕೋಟಿ ರೂ.ಆದಾಯ ಗಳಿಸಿದೆ. ಮೆಟ್ರೋ ಪ್ರಯಾಣಿಕರ ಸಂಖ್ಯೆಯೂ ಶೇ.30ರಷ್ಟು ಏರಿಕೆ ಕಂಡಿದೆ. ನಮ್ಮ ರಾಜ್ಯದ ಪೈಕಿ ಬೆಂಗಳೂರಿನಲ್ಲಿ ಮಾತ್ರ ಮೆಟ್ರೋ ಇದೆ. ಶಕ್ತಿ ಯೋಜನೆ ಕರ್ನಾಟಕದಾದ್ಯಂತ ಜಾರಿ ಮಾಡಲಾಗಿದೆ. ನಾವು ಬಡವರ ಬಗ್ಗೆ ಆಲೋಚಿಸಿ ಈ ಯೋಜನೆ ಜಾರಿ ಮಾಡಿದ್ದೇವೆ ಎಂದರು.

‘ಕೋವಿಡ್ ಸಮಯದಲ್ಲಿ ಉಚಿತ ಬಸ್ ಪ್ರಯಾಣ ವ್ಯವಸ್ಥೆಗೆ ಒತ್ತಾಯ ಮಾಡಿದ್ದು ನಾವೇ. ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನರಿಗೆ ನೆರವಾಗಲು ಗ್ಯಾರಂಟಿ ಜಾರಿ ಮಾಡಿದ್ದೇವೆ. ಕಾಂಗ್ರೆಸ್ ಸರಕಾರ ಬಂದ ನಂತರ ಮೊದಲು ಜಾರಿ ಮಾಡಿದ್ದು ʼಶಕ್ತಿʼ ಯೋಜನೆ. ಸಾರ್ವಜನಿಕರ ಅನುಕೂಲಕ್ಕೆ ಸಾರಿಗೆ ಇಲಾಖೆಯಿಂದ 1 ಸಾವಿರಕ್ಕೂ ಹೆಚ್ಚು ಹೊಸ ಬಸ್ ಗಳನ್ನು ಖರೀದಿ ಮಾಡಲಾಗಿದೆ. ಬಿಜೆಪಿಯವರಿಂದ ಇಂತಹ ಒಂದೇ ಒಂದು ಯೋಜನೆ ಜಾರಿ ಮಾಡಲು ಆಗಲಿಲ್ಲ’ ಎಂದು ಅವರು ವಾಗ್ದಾಳಿ ನಡೆಸಿದರು.

ತೆಲಂಗಾಣದಲ್ಲೂ ಈ ಯೋಜನೆ ಜಾರಿ ಮಾಡಿದ್ದೇವೆ. ನಮ್ಮ ಮೆಟ್ರೋದಲ್ಲಿ ಶೇ.30ರಷ್ಟು ಪ್ರಯಾಣಿಕರ ಸಂಖ್ಯೆ ಹಾಗೂ ಆದಾಯ ಹೆಚ್ಚಾಗಿದೆ. ಮೆಟ್ರೋದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪಾಲುದಾರರು. ಆದರೂ ಪ್ರಧಾನಿಗೆ ಈ ವಿಚಾರವಾಗಿ ಮಾಹಿತಿ ಕೊರತೆ ಇದೆ. ಯಾರೋ ಅವರಿಗೆ ತಪ್ಪು ಮಾಹಿತಿ ನೀಡಿದಂತಿದೆ ಎಂದು ಅವರು ತಿಳಿಸಿದರು.

ನಮ್ಮ ಶಕ್ತಿ ಯೋಜನೆ ಬಗ್ಗೆ ಬೇರೆ ರಾಜ್ಯದವರು ಬಂದು ಮಾಹಿತಿ ಪಡೆಯುತ್ತಿದ್ದಾರೆ. ಈ ಯೋಜನೆ ಜನರಿಗೆ ಅನುಕೂಲ ತಂದಿದೆ, ಅವರ ವಿಶ್ವಾಸ ಗಳಿಸಿದೆ. ದಿನನಿತ್ಯ ರಾಜ್ಯದಲ್ಲಿ ಮಹಿಳೆಯರು 60ಲಕ್ಷ ಟ್ರಿಪ್‍ನಷ್ಟು ಉಚಿತ ಬಸ್ ಪ್ರಯಾಣ ಮಾಡುತ್ತಿದ್ದಾರೆ. ಮಹಿಳೆಯರು ಈ ಯೋಜನೆಯಿಂದ ತೃಪ್ತರಾಗಿ ಸಂತೋಷದಿಂದ ಪ್ರಯಾಣ ಮಾಡುತ್ತಿದ್ದಾರೆ ಎಂದು ತಿಳಿಸಿದರು.

‘ಸಾರಿಗೆ ಇಲಾಖೆ ವತಿಯಿಂದ 1 ಸಾವಿರ ಹೊಸ ಬಸ್‍ಗಳನ್ನು ನಿಯೋಜಿಸಲು ಬುಕ್ ಮಾಡಲಾಗಿದೆ. ರಾಮನಗರಕ್ಕೆ 100ಬಸ್ ನಿಯೋಜಿಸಲಾಗಿದೆ. ಬೆಂಗಳೂರು, ಉತ್ತರ ಕರ್ನಾಟಕದ ಭಾಗಗಳಿಗೂ ಬಸ್ ಹಂಚಿಕೆ ಮಾಡುತ್ತೇವೆ. ಕೆಎಸ್ಸಾರ್ಟಿಸಿಯಲ್ಲಿ ನಾವು ಲಾಭ ನೋಡುತ್ತಿಲ್ಲ. ನಮಗೆ ನಷ್ಟ ಆಗದಿದ್ದರೆ ಸಾಕು. ಇನ್ನು ಸರಕಾರ ಮಹಿಳೆಯರ ಪ್ರಯಾಣದ ವೆಚ್ಚವನ್ನು ಭರಿಸುತ್ತಿದೆಯೇ ಹೊರತು ಸಾರಿಗೆ ಸಂಸ್ಥೆಗಳಿಂದ ವೆಚ್ಚ ಭರಿಸುತ್ತಿಲ್ಲ ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News