ಅಶೋಕ್ ಅವರನ್ನು ಪ್ರಧಾನಿ ಕಚೇರಿ ಲೆಕ್ಕಕ್ಕೇ ಇಟ್ಟುಕೊಂಡಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು

Update: 2023-08-26 09:14 GMT

ಬೆಂಗಳೂರು: “ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಕಚೇರಿ ಆರ್. ಅಶೋಕ್ ಅವರನ್ನು ಲೆಕ್ಕಕ್ಕೇ ಇಟ್ಟುಕೊಂಡಿಲ್ಲ ಎಂಬುದಕ್ಕೆ ಅವರ ಮಾತೇ ಸಾಕ್ಷಿ. ನಾವು ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾಗತಕ್ಕೆ ಸಿದ್ಧವಿದ್ದೆವು. ಆದರೆ ಪ್ರಧಾನಮಂತ್ರಿಗಳ ಕಚೇರಿಯ ಸಂದೇಶ ಗೌರವಿಸಿ, ಸ್ವಾಗತಕ್ಕೆ ತೆರಳಲಿಲ್ಲ. ಈ ವಿಚಾರದ ಬಗ್ಗೆ ಪ್ರಧಾನಿ ಕಚೇರಿಯಿಂದ ಮಾಹಿತಿ ಪಡೆದುಕೊಂಡು ನಂತರ ಅಶೋಕ್ ಮಾತನಾಡಲಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳು, ಬೆಂಗಳೂರಿಗೆ ಆಗಮಿಸಿದ ಪ್ರಧಾನಮಂತ್ರಿಗಳನ್ನು ಸ್ವಾಗತಿಸಲು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಾಗಲಿ, ಸರ್ಕಾರದ ಪ್ರತಿನಿಧಿಗಳಾಗಲಿ ತೆರಳಿಲ್ಲ ಎಂಬ ವಿಚಾರದ ಬಗ್ಗೆ ಆರ್. ಅಶೋಕ್ ಅವರ ಟೀಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಮೇಲಿನಂತೆ ಪ್ರತಿಕ್ರಿಯಿಸಿದರು. 

“ನಮಗೆ ರಾಜಕೀಯ ಪ್ರಜ್ಞೆ, ಶಿಷ್ಟಾಚಾರ, ಯಾರಿಗೆ ಯಾವ ಗೌರವ ನೀಡಬೇಕು ಎಂಬ ಪರಿಜ್ಞಾನ ಬಿಜೆಪಿಯವರಿಗಿಂತಲೂ ಹೆಚ್ಚಾಗಿ ಇದೆ. ಶಿಷ್ಟಾಚಾರದ ಪ್ರಕಾರ ಸರ್ಕಾರ ಪ್ರಧಾನಿಗಳ ಸ್ವಾಗತಕ್ಕೆ ಸಿದ್ಧವಿತ್ತು. ಆದರೆ ಪ್ರಧಾನಮಂತ್ರಿಗಳ ಕಚೇರಿಯಿಂದಲೇ ಬರಬಾರದೆಂದು ಅನಧಿಕೃತವಾಗಿ ನಮಗೆ ಸಂದೇಶ ಬಂದಿತ್ತು. ನಾವು ಮುಖ್ಯಕಾರ್ಯದರ್ಶಿಗಳಿಗೆ ಈ ವಿಚಾರವಾಗಿ ಲಿಖಿತ ಸಂದೇಶ ನೀಡಿ ಎಂದು ಮನವಿ ಮಾಡಿದೆವು. ನಂತರ ಅವರು ಅಧಿಕೃತವಾಗಿ ಪತ್ರದ ಮೂಲಕ ರಾಜ್ಯಪಾಲರು, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಸೇರಿದಂತೆ ಯಾರೂ ಸ್ವಾಗತ ಮಾಡಲು ಬರುವುದು ಬೇಡ ಎಂದು ಸಂದೇಶ ರವಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ತೆರಳಲಿಲ್ಲ. ಅಶೋಕ್ ಅವರು ಈ ಬಗ್ಗೆ ತಿಳಿದುಕೊಂಡಿದ್ದರೆ ಚನ್ನಾಗಿತ್ತುʻʻ ಎಂದು ಹೇಳಿದರು.

ʻʻನಾವು ಪ್ರಧಾನಮಂತ್ರಿ ಸ್ಥಾನಕ್ಕೆ ಗೌರವ ನೀಡುತ್ತೇವೆ. ಅವರು ನಮ್ಮ ವಿಜ್ಞಾನಿಗಳನ್ನು ಸನ್ಮಾನಿಸಲು ಬಂದಿದ್ದಾರೆ. ನಾವು ಅವರನ್ನು ಸ್ವಾಗತಿಸುತ್ತೇವೆ. ನಮಗೆ ಈ ವಿಚಾರದಲ್ಲಿ ರಾಜಕೀಯ ಮಾಡುವ ಉದ್ದೇಶವಿಲ್ಲ. ರಾಜಕೀಯ ಆಟ ಮುಗಿದಿದೆ. ಇನ್ನು ಅಭಿವೃದ್ಧಿಯತ್ತ ಗಮನಹರಿಸಬೇಕು. ರಾಜ್ಯದ ಘನತೆ, ರಾಜ್ಯದ ಸಂಸ್ಕೃತಿ ಉಳಿಸಲು ನಾವು ಕೆಲಸ ಮಾಡಬೇಕು. ಅಶೋಕ್ ಅವರಿಗೆ ಈ ವಿಚಾರವಾಗಿ ಮಾಹಿತಿ ಇಲ್ಲ. ಪ್ರಧಾನಮಂತ್ರಿಗಳ ಕಚೇರಿ ಅವರನ್ನು ರಾಜಕೀಯ ಚಿತ್ರಣದಿಂದ ದೂರವಿಟ್ಟಿದೆ. ಹೀಗಾಗಿ ಅವರು ಮಾಹಿತಿ ಇಲ್ಲದೆ ಮಾತನಾಡಿದ್ದಾರೆ. ಅದಕ್ಕೆ ನಾವೇನು ಮಾಡಲು ಸಾಧ್ಯ? ಅವರಲ್ಲಿ ಏನೋ ಸಮಸ್ಯೆ ಇರಬಹುದು.” ಎಂದು ಅವರು ಟೀಕಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News