ಪೊಕ್ಸೊ ಪ್ರಕರಣ: ಮುರುಘಾಶ್ರೀ ಜೈಲಿನಿಂದ ಬಿಡುಗಡೆ

Update: 2023-11-16 08:57 GMT

ಚಿತ್ರದುರ್ಗ: ಪೊಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ದೊರೆತ ಹಿನ್ನಲೆಯಲ್ಲಿ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರನ್ನು ಚಿತ್ರದುರ್ಗ ಕಾರಾಗೃಹದಿಂದ ಬಿಡುಗಡೆ ಮಾಡಲಾಗಿದೆ. 

ಒಂದನೇ ಪೊಕ್ಸೊ ಪ್ರಕರಣದಲ್ಲಿ ಮುರುಘಾ ಶ್ರೀಗಳಿಗೆ ಜಾಮೀನು ದೊರೆತ ಹಿನ್ನೆಲೆಯಲ್ಲಿ ಬಿಡುಗಡೆ ಆದೇಶ ಪ್ರತಿ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿತ್ತು. ಇದೀಗ ಜಿಲ್ಲಾ ಕಾರಾಗೃಹದ ಅಧಿಕಾರಿಗಳು ಕಾನೂನು ಪ್ರಕ್ರಿಯೆ ನಡೆಸಿ, ಮುರುಘಾ ಶರಣರನ್ನು ಬಿಡುಗಡೆ ಮಾಡಿದರು. 

ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಮುರುಘಾ ಶ್ರೀ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಜೈಲು ಸೇರಿದ್ದ ಮುರುಘಾ ಶ್ರೀಗೆ ನ.8 ರಂದು ಹೈಕೋರ್ಟ್ ಒಂದು ಪ್ರಕರಣದಲ್ಲಿ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಆದರೆ ಇನ್ನೊಂದು ಪ್ರಕರಣದ ವಿಚಾರಣೆ ಬಾಕಿ ಹಿನ್ನೆಲೆಯಲ್ಲಿ ಜಾಮೀನು ಸಿಕ್ಕರೂ ಬಿಡುಗಡೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮುರುಘಾ ಶ್ರೀ ಪರ ವಕೀಲರು ಶ್ರೀಗಳ ಬಿಡುಗಡೆಗೆ ಕೋರಿ ಚಿತ್ರದುರ್ಗ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.

7 ಷರತ್ತುಗಳನ್ನ ವಿಧಿಸಿ ಜಾಮೀನು ನೀಡಿದ್ದ ಹೈಕೋರ್ಟ್

2 ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ ನೀಡಬೇಕು. ಸಾಕ್ಷಿಗಳಿಗೆ ಬೆದರಿಕೆ ಹಾಕುವಂತಿಲ್ಲ. ನ್ಯಾಯಾಲಯದ ವಶಕ್ಕೆ ಪಾಸ್‍ಪೋರ್ಟ್ ಸಲ್ಲಿಸಬೇಕು. ವಿಡಿಯೊ ಕಾನ್ಫ್‍ರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಬೇಕು. ಜಾಮೀನು ಮಂಜೂರು ಆದೇಶವನ್ನು ಶರಣರು ದುರ್ಬಳಕೆ ಮಾಡಿಕೊಳ್ಳಬಾರದು. ನ್ಯಾಯಾಲಯ ವಿಧಿಸಿದ ಷರತ್ತು ಉಲ್ಲಂಘಿಸಿದರೆ, ಜಾಮೀನು ತನ್ನಿಂದ ತಾನೇ ರದ್ದಾಗಲಿದೆ. ಅದೇ ರೀತಿ, ಪ್ರಮುಖವಾಗಿ ಪ್ರಕರಣದ ವಿಚಾರಣೆ ಮುಗಿಯುವವರೆಗೆ ಚಿತ್ರದುರ್ಗ ಜಿಲ್ಲೆಯ ಪ್ರವೇಶ ಮಾಡಬಾರದು ಎಂದು ಷರತ್ತುಗಳನ್ನು ಉಲ್ಲೇಖಿಸಿ ನ್ಯಾಯಾಲಯವು ಜಾಮೀನು ಮಂಜೂರು ಮಾಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News