ಪೋಕ್ಸೋ ಪ್ರಕರಣ | ನಾಳೆ(ಜೂ.17) ಬಿಎಸ್‌ವೈ ವಿಚಾರಣೆ ಸಾಧ್ಯತೆ
ಬೆಂಗಳೂರು: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಡಿ ದಾಖಲಾಗಿರುವ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಳೆ(ಜೂ.17) ಸಿಐಡಿ ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.
ಪ್ರಕರಣದ ವಿಚಾರಣೆಗೆ ಹಾಜರಾಗಲು ಸೂಚಿಸಿ ಸಿಐಡಿ ಪೊಲೀಸರು ಎರಡನೆ ನೋಟಿಸ್ ಜಾರಿ ಮಾಡಿದ್ದರಿಂದ ಮತ್ತು ನಗರದ 1ನೆ ತ್ವರಿತಗತಿ ನ್ಯಾಯಾಲಯ(ಪೋಕ್ಸೋ ವಿಶೇಷ ನ್ಯಾಯಾಲಯ) ಜಾಮೀನು ರಹಿತ ಬಂಧನ ವಾರಂಟ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಯಡಿಯೂರಪ್ಪಗೆ ಬಂಧನ ಭೀತಿ ಎದುರಾಗಿತ್ತು. ಆದರೆ, ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ನ್ಯಾಯಪೀಠ, ಮುಂದಿನ ವಿಚಾರಣೆವರೆಗೂ ಬಂಧನದಂತ ಕಠಿಣ ಕ್ರಮಕ್ಕೆ ಮುಂದಾಗದಂತೆ ಸೂಚನೆ ನೀಡಿತ್ತು.
ಜತೆಗೆ, ಸಿಐಡಿ ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ಜ.17ರಂದು ಯಡಿಯೂರಪ್ಪ ವಿಚಾರಣೆಗೆ ಹಾಜರಾಗಬೇಕು ಎಂದು ನ್ಯಾಯಪೀಠ ನಿರ್ದೇಶಿಸಿತು. ಅದರಂತೆ ಸೋಮವಾರ ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಯಡಿಯೂರಪ್ಪ ಅವರು ನನ್ನ ಸಹೋದರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ಕುರಿತು ತಾಯಿ ಮಾ.14ರಂದು ಸದಾಶಿವನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಗೆ ದೂರು ನೀಡಿದ್ದರು. ಪೊಲೀಸರು ಪೋಕ್ಸೋ ಕಾಯ್ದೆ ಸೆಕ್ಷನ್ 8 ಮತ್ತು ಐಪಿಸಿ ಸೆಕ್ಷನ್ 354(ಎ) ಅಡಿ ಅಪ್ರಾಪ್ತೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಎಫ್‍ಐಆರ್ ದಾಖಲಿಸಿದ್ದರು. ಪ್ರಕರಣವನ್ನು ಸಿಐಡಿ ತನಿಖೆಗೆ ವರ್ಗಾಯಿಸಲಾಗಿತ್ತು. ಆದರೆ, ದೂರು ದಾಖಲಾಗಿ ಎರಡು ತಿಂಗಳು ಕಳೆದರೂ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿಲ್ಲ ಎಂದು ಸಂತ್ರಸ್ತೆ ಸಹೋದರ ಇತ್ತೀಚಿಗೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಸಿಸಿಟಿವಿ ದೃಶ್ಯಗಳು, ಮೆಮೊರಿಕಾರ್ಡ್ ಮತ್ತು ಹಾರ್ಡ್ ಡಿಸ್ಕ್ ವಶಪಡಿಸಿಕೊಂಡು, ಒಂದು ತಿಂಗಳ ಒಳಗೆ ವರದಿ ಸಲ್ಲಿಸಲು ನಗರ ಪೊಲೀಸ್ ಆಯುಕ್ತರು ಮತ್ತು ಸಿಐಡಿ ಇನ್ಸ್ ಪೆಕ್ಟರ್ ಗೆ ನಿರ್ದೇಶಿಸಬೇಕು ಎಂದೂ ಅರ್ಜಿದಾರರು ಉಲ್ಲೇಖಿಸಿದ್ದರು.