ಪೋಕ್ಸೋ ಪ್ರಕರಣ| ಸಾಕ್ಷ್ಯಾಧಾರ ಸೂಕ್ಷ್ಮವಾಗಿ ಪರಿಗಣಿಸದ ನ್ಯಾಯಾಧೀಶರಿಗೆ ತರಬೇತಿ: ಹೈಕೋರ್ಟ್ ಸೂಚನೆ

Update: 2023-12-31 14:56 GMT

ಬೆಂಗಳೂರು: ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಆರೋಪಿಯ ವಿರುದ್ಧದ ಸಾಕ್ಷ್ಯಾಧಾರಗಳನ್ನು ಸೂಕ್ಷ್ಮವಾಗಿ ಪರಿಗಣಿಸದೆ ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಆರೋಪಿಗೆ 5 ವರ್ಷಗಳ ಶಿಕ್ಷೆ ವಿಧಿಸಿದೆ. ಅಲ್ಲದೆ, ಪ್ರಕರಣದ ವಿಚಾರಣೆ ನಡೆಸಿ ಆದೇಶ ನೀಡಿರುವ ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಿಗೆ ವೃತ್ತಿಪರತೆಯ ಕೊರತೆಯಿದ್ದು, ನ್ಯಾಯಾಂಗ ಅಕಾಡಮಿಯಿಂದ ತರಬೇತಿ ಪಡೆಯಲು ಸೂಚಿಸಿದೆ.

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಆರೋಪಿಯನ್ನು ಖುಲಾಸೆಗೊಳಿಸಿ ಆದೇಶಿಸಿದ್ದ ಪೋಕ್ಸೋ ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸರಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠವು ಈ ಆದೇಶ ನೀಡಿದೆ.

ಈ ರೀತಿಯ ಪ್ರಕರಣಗಳಲ್ಲಿ ಸಂತ್ರಸ್ತೆ, ಪೋಷಕರು ಮತ್ತು ಸಂಬಂಧಿಕರು ಸಾಕ್ಷ್ಯಗಳನ್ನು ನುಡಿದಿದ್ದರೂ, ವಿಚಾರಣಾ ನ್ಯಾಯಾಲಯ ಸ್ವತಂತ್ರ ಸಾಕ್ಷ್ಯಗಳು ಹಾಗೂ ಪ್ರತ್ಯಕ್ಷ್ಯ ಸಾಕ್ಷ್ಯಗಳು ಬೇಕು ಎಂದು ಬಯಸಿರುವುದು ಸಾಧ್ಯವಾಗದ ಅಂಶವಾಗಿದೆ. ಪೋಕ್ಸೋ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯ ಸಾಕ್ಷ್ಯಗಳ ವಿಚಾರಣೆ ಸಂದರ್ಭದಲ್ಲಿ ಅತ್ಯಂತ ತಾಂತ್ರಿಕ ದೃಷ್ಠಿಯಿಂದ ಪರಿಗಣಿಸಿದೆ. ಈ ಬೆಳವಣಿಗೆ ಅಮಾನವೀಯ ಮತ್ತು ಸಂಪೂರ್ಣ ತಪ್ಪಾಗಿದೆ ಎಂದು ಪೀಠ ತಿಳಿಸಿದೆ.

ಅಪರಾಧಿಗೆ ಶಿಕ್ಷೆ ವಿಧಿಸಿರುವ ಹೈಕೋರ್ಟ್ ನ್ಯಾಯಪೀಠವು ಸಂತ್ರಸ್ತೆಗೆ 5 ಲಕ್ಷ ರೂ.ಗಳ ಪರಿಹಾರ ನೀಡುವಂತೆ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸೂಚನೆ ನೀಡಿ ಆದೇಶಿಸಿದೆ.

ಪ್ರಕರಣವೇನು?: 2018ರ ಫೆಬ್ರವರಿಯಲ್ಲಿ 8 ವರ್ಷದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ವ್ಯಕ್ತಿ ಐಪಿಸಿ ಹಾಗೂ ಪೋಕ್ಸೋ ಕಾಯ್ದೆಯಡಿಯಲ್ಲಿ ವಿಚಾರಣೆಗೆ ಒಳಗಾಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ವಿಚಾರಣಾ ನ್ಯಾಯಾಲಯವು  ಸಂತ್ರಸ್ತೆಯ ದೇಹದ ಮೇಲೆ ಯಾವುದೇ ಗಾಯಗಳಿಲ್ಲ ಎಂಬುದಾಗಿ ವೈದ್ಯರು ನೀಡಿದ ವರದಿಯ ಆಧಾರದಲ್ಲಿ 2020ರ ಡಿಸೆಂಬರ್ ತಿಂಗಳಲ್ಲಿ ಆರೋಪಿಯನ್ನು ಖುಲಾಸೆಗೊಳಿಸಿ ಆದೇಶಿಸಿತ್ತು. ಇದನ್ನು ಹೈಕೋರ್ಟ್‍ನಲ್ಲಿ ಪ್ರಶ್ನಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News