ಇತರರು ಹೆಚ್ಚು ಭ್ರಷ್ಟ್ರರು ಎನ್ನುವ ರಾಜಕಾರಣಿಗಳೇ ತುಂಬಿಹೋಗಿದ್ದಾರೆ: ಮುಖ್ಯಮಂತ್ರಿ ಚಂದ್ರು
ರಾಯಚೂರು: ಭ್ರಷ್ಟಾಚಾರ ಆರೋಪ ಬಂದಾಗ ನಾವು ಭ್ರಷ್ಟರಲ್ಲ ಎಂದು ಯಾರೂ ಹೇಳುತ್ತಿಲ್ಲ. ಬದಲಾಗಿ ಅವರು ಹೆಚ್ಚು ಭ್ರಷ್ಟಾಚಾರ ಮಾಡಿದ್ದಾರೆಂದು ಬೇರೆಯವರ ಮೇಲೆ ಗೂಬೆ ಕೂರಿಸುವ ರಾಜಕಾರಣಿಗಳೇ ತುಂಬಿ ಹೋಗಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಶುಕ್ರವಾರ ಎರಡು ಗುತ್ತಿಗೆ ಕಂಪನಿಗಳು ಹಾಗೂ ಗುತ್ತಿಗೆದಾರರಿಗೆ ಸಂಬಂಧಪಟ್ಟ ಜಾಗಗಳ ಮೇಲೆ ಐಟಿ ದಾಳಿ ವಿಚಾರವನ್ನು ಪ್ರಸ್ತಾಪಿಸಿ ಹಿಂದಿನ ಬಿಜೆಪಿ ಸರ್ಕಾರ ಮತ್ತು ಇಂದಿನ ಕಾಂಗ್ರೆಸ್ ಸರ್ಕಾರಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಪ್ರತಿಯೊಂದು ಕಾಮಗಾರಿಯಲ್ಲೂ 40-50 ಪರ್ಸೆಂಟ್ ಕಮಿಷನ್ ತೆಗೆದುಕೊಂಡರೆ ಉತ್ತಮ ಗುಣಮಟ್ಟದ ಕೆಲಸಗಳನ್ನು ಹೇಗೆ ಮಾಡಲು ಸಾಧ್ಯ? ಉದ್ಘಾಟನೆಗೊಂಡ ಮೂರು ದಿನದಲ್ಲೇ ರಸ್ತೆಗಳು ಗುಂಡಿ ಬೀಳುತ್ತವೆ, ಚರಂಡಿಗಳು ಬಾಯ್ಬಿಟ್ಟುಕೊಳ್ಳುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೆಹಲಿ, ಪಂಜಾಬ್‌ನಲ್ಲಿ ಶಿಕ್ಷಣ ಕ್ರಾಂತಿ, ಆರೋಗ್ಯ ಕ್ರಾಂತಿಗಳು ಆಗಿವೆ. ಆದರೆ ಇಲ್ಲಿ ಯಾಕೆ ಆಗುತ್ತಿಲ್ಲ? ಇಲ್ಲಿನ ಶೇ.60 ರಷ್ಟು ಶಾಸಕರು, ಸಂಸದರು ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಗಳ ಮಾಲೀಕರಾಗಿದ್ದಾರೆ. ನೂರಾರು ಕೋಟಿ ಒಡೆಯರೇ ಇವತ್ತು ಶಾಸಕ, ಸಂಸದರು, ಮಂತ್ರಿಗಳಾಗಿದ್ದಾರೆ. ಹೀಗಿರುವಾಗ ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರಗಳು ಬಡವರ ಹಾಗೂ ಮಧ್ಯಮ ವರ್ಗದವರ ಕೈಗೆಟುಕುವುದು ಹೇಗೆ? ಎಂದು ಪ್ರಶ್ನಿಸಿದರು.
ನಾಡಿನ ಸಂಸ್ಕೃತಿಯನ್ನು ಕೊಲ್ಲದಿರಿ:
ಕನ್ನಡ ಸಂಸ್ಕೃತಿ ಇಲಾಖೆಯನ್ನು ನಿಭಾಯಿಸಲು ಸಚಿವ ಶಿವರಾಜ್ ತಂಗಡಗಿ ಅವರಿಗೆ ಆಗುತ್ತಿಲ್ಲ. ಇಲಾಖೆಯಲ್ಲಿ ಐದು ಪೈಸೆ ದುಡ್ಡಿಲ್ಲ. ಒಟ್ಟು 14 ಅಕಾಡೆಮಿಗಳಿದ್ದು, ಒಂದು ಅಕಾಡೆಮಿಗೂ ಅಧಿಕಾರಿಗಳಿಲ್ಲ. 6 ಪ್ರಾಧಿಕಾರಗಳಿದ್ದು, ಅವಕ್ಕೂ ಹಣ ಇಲ್ಲದಂತಾಗಿದೆ. ದಯವಿಟ್ಟು ನಾಡಿನ ಸಂಸ್ಕೃತಿಯನ್ನು ಕೊಲ್ಲದಿರಿ ಎಂದು ರಾಜ್ಯ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ಗ್ಯಾರಂಟಿಗಳ ಅವೈಜ್ಞಾನಿಕ ಅನುಷ್ಠಾನ:
ದೆಹಲಿ ಮತ್ತು ಪಂಜಾಬ್‌ನಲ್ಲಿರುವ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಇಲ್ಲಿನ ಚುನಾವಣೆ ಗೆಲ್ಲುವುದಕ್ಕಾಗಿ ಕಾಂಗ್ರೆಸ್ ಪಕ್ಷವು ಕಾಪಿ ಮಾಡಿ ಅನುಷ್ಠಾನಕ್ಕೆ ತಂದಿದೆ. ಆದರೆ ದೆಹಲಿ, ಪಂಜಾಬ್ ರಾಜ್ಯಗಳಲ್ಲಿ ಆದಂತೆ ಯಶಸ್ವಿಯಾಗಲಿಲ್ಲ. ಕಾರಣ, ಕಾಂಗ್ರೆಸ್ ಸರ್ಕಾರವು ತರಾತುರಿಯಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸಿತು. ಸರಿಯಾಗಿ ಅಧ್ಯಯನ ಮಾಡದೆ, ಅವೈಜ್ಞಾನಿಕವಾಗಿ ಅನುಷ್ಠಾನಕ್ಕೆ ತಂದಿದ್ದುದರ ಪರಿಣಾಮವನ್ನು ನಾವೀಗ ಎದುರಿಸುತ್ತಿದ್ದೇವೆ. ವಿದ್ಯುತ್ ಅಭಾವ, ತೀವ್ರ ನಷ್ಟಕ್ಕೆ ಒಳಗಾದ ಸಾರಿಗೆ ಇಲಾಖೆ, ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನವನ್ನೇ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಚಂದ್ರು ಅವರು ಟೀಕಿಸಿದರು.
ಪಕ್ಷದ ರಾಜ್ಯ ಉಪಾಧ್ಯಕ್ಷ ರುದ್ರಯ್ಯ ನವಲಿ ಹಿರೇಮಠ, ರಾಜ್ಯ ಸಂಘಟನಾ ಕಾರ್ಯದರ್ಶಿ ಅರ್ಜುನಪ್ಪ ಹಲಗೀ ಗೌಡರ್, ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ, ರಾಯಚೂರು ಜಿಲ್ಲಾಧ್ಯಕ್ಷ ವೀರೇಶ್ ಕುಮಾರ್, ರಾಯಚೂರು ಜಿಲ್ಲಾ ಸೆಕ್ರೆಟರಿ ಮುಷರಫ್ ಸೈಯದ್ ಅಲಿ ಖಾನ್ ಉಪಸ್ಥಿತರಿದ್ದರು.