‘ಪಿಎಸೈ ಹಗರಣ’ ನ್ಯಾಯಾಂಗ ತನಿಖೆಗೆ ವಹಿಸಿದ್ದು ದ್ವೇಷದ ರಾಜಕಾರಣ: ಬಸವರಾಜ ಬೊಮ್ಮಾಯಿ

Update: 2023-07-22 16:21 GMT

ಬೆಂಗಳೂರು, ಜು.22: ಪಿಎಸ್ಸೈ ನೇಮಕಾತಿ ಹಗರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿದ್ದು ದ್ವೇಷದ ರಾಜಕಾರಣ. ಇದು ಎಲ್ಲಿಗೆ ಹೋಗುತ್ತಿದೆ ಅನ್ನುವುದು ಗೊತ್ತಾಗುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್ಸೈ ಹಗರಣ ನಾವೆ ಹೊರಗೆ ತಂದು ಸಿಐಡಿ ತನಿಖೆಗೆ ಆದೇಶ ಮಾಡಿದ್ದೇವು. ಪ್ರಕರಣದಲ್ಲಿ ಎಡಿಜಿಪಿ ಹುದ್ದೆಯ ಅಧಿಕಾರಿಯನ್ನು ಜೈಲಿಗೆ ಕಳುಹಿಸಿದ್ದೇವೆ. ಈ ಹಗರಣದಲ್ಲಿ ಕಾಂಗ್ರೆಸ್ ನವರು ಇದ್ದಾರೆ. ಪ್ರಕರಣದ ತನಿಖೆ ನಡೆದು ಕೊರ್ಟ್‍ನಲ್ಲಿದೆ. ಈ ಸಂದರ್ಭ ಮತ್ತೆ ತನಿಖೆಗೆ ಆದೇಶ ಮಾಡಿರುವುದು ದ್ವೇಷ ರಾಜಕೀಯವನ್ನು ತೋರಿಸುತ್ತದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರ ಜೀವನ ದುಸ್ತರವಾಗಿದೆ. ಕಾಂಗ್ರೆಸ್ ಸರಕಾರ ಬಂದ ತಕ್ಷಣ ವಿದ್ಯುತ್ ದರ ಹೆಚ್ಚಳ ಮಾಡಿದರು. ಎಲ್ಲ ಕಾಯಿಪಲ್ಯೆ ದರ ಹೆಚ್ಚಳ ಆಗಿದೆ. ಈಗ ಹಾಲಿನ ದರ ಹೆಚ್ಚಳ ಮಾಡಿದ್ದಾರೆ. ಆಗಸ್ಟ್ 1ರ ನಂತರ ಸೈಟ್, ಕಾರು, ಹೊಸ ಮನೆ ಖರೀದಿ ದರವೂ ಹೆಚ್ಚಳವಾಗಲಿದೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಬಿಜೆಪಿಯವರು ಗೋಡ್ಸೆ ಪ್ರತಿಮೆ ಮುಂದೆ ಪ್ರತಿಭಟನೆ ಮಾಡಲಿ ಅಂತ ಹೇಳಿದ್ದಾರೆ. ನಕಲಿ ಗಾಂಧಿಗಳ ಜಪ ಮಾಡುತ್ತಿರುವವರು ಕಾಂಗ್ರೆಸ್ ನವರು. ಗಾಂಧೀಜಿಯನ್ನು ಹೆಚ್ಚು ದುರುಪಯೋಗ ಮಾಡಿಕೊಂಡವರು ಕಾಂಗ್ರೆಸ್ ನವರು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಗಾಂಧೀಜಿ ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಅನ್ನು ವಿಸರ್ಜಿಸಿ ಅಂತ ಹೇಳಿದ್ದರು. ಯಾಕೆಂದರೆ ಕಾಂಗ್ರೆಸ್ ನವರಿಗೆ ದೇಶ ಆಳಲು ಬರುವುದಿಲ್ಲ ಅಂತ. ಆದರೆ, ಇವರು ಗಾಂಧೀಜಿ ಹೆಸರು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News