ಸಾರ್ವಜನಿಕ ಶೌಚಾಲಯ ಅಸಮರ್ಪಕ ನಿರ್ವಹಣೆ: ಹೈಕೋರ್ಟ್ ಅಸಮಾಧಾನ
ಬೆಂಗಳೂರು, ಆ.9: ಬೆಂಗಳೂರು ನಗರದಲ್ಲಿನ ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ ವಿಚಾರದಲ್ಲಿ ಬಿಬಿಎಂಪಿಯ ನಿರ್ಲಕ್ಷ್ಯ ಹಾಗೂ ರಾಜ್ಯ ಸರಕಾರದ ಮೌನದ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಜತೆಗೆ, ಶೌಚಾಲಯಗಳ ಸ್ಥಿತಿಗತಿಗಳ ನಿರ್ವಹಣೆಗೆ ಸಂಬಂಧಿಸಿದಂತೆ ಮೂರು ವಾರಗಳಲ್ಲಿ ಹೊಸದಾಗಿ ವಿವರವಾದ ವರದಿ ಸಲ್ಲಿಸುವಂತೆ ಬಿಬಿಎಂಪಿಗೆ ಕೋರ್ಟ್ ನಿರ್ದೇಶನ ನೀಡಿದೆ.
ಈ ಸಂಬಂಧ ಲೆಟ್ಸ್ ಕಿಟ್ ಫೌಂಡೇಷನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠ, ನಗರದಲ್ಲಿನ ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಗೆ ಬಿಬಿಎಂಪಿ ಬಳಿ ಸಲಹೆಗಳೇನಾದರೂ ಇದ್ದರೆ ಅದನ್ನು ವರದಿಯಲ್ಲಿ ಸೇರಿಸಬೇಕು ಎಂದು ನಿರ್ದೇಶಿಸಿದೆ.
ಈ ಅರ್ಜಿಯ ವಿಚಾರಣೆಯು ಐದು ವರ್ಷಗಳಿಂದ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಆದರೆ, ರಾಜ್ಯ ಸರಕಾರ ಈವರೆಗೆ ಈ ವಿಚಾರವಾಗಿ ಒಂದೇ ಒಂದು ಪ್ರಮಾಣಪತ್ರ ಸಲ್ಲಿಸಿಲ್ಲ. ಬೆಂಗಳೂರು ನಿವಾಸಿಗಳಿಗೆ ಸಂಬಂಧಿಸಿದ ಇಂಥ ವಿಷಯದಲ್ಲೂ ರಾಜ್ಯ ಸರಕಾರ ಕಣ್ಣು ಮುಚ್ಚಿರುವುದು ಮೌನವಾಗಿರುವುದು ಅಚ್ಚರಿ ತರಿಸಿದೆ ಎಂದು ಹೇಳಿದ ನ್ಯಾಯಪೀಠವು ಅರ್ಜಿ ವಿಚಾರಣೆಯನ್ನು ಮುಂದೂಡಿತು.