ಚಂದ್ರಯಾನ-3 ಕುರಿತ ಪೋಸ್ಟ್: ನಟ ಪ್ರಕಾಶ್ ರಾಜ್ ವಿರುದ್ಧ ದೂರು ದಾಖಲು
ಬೆಂಗಳೂರು: ಸಾಮಾಜಿಕ ಮಾಧ್ಯಮ ಪೋಸ್ಟ್ ಒಂದರಲ್ಲಿ ಭಾರತದ ಚಂದ್ರಯಾನ-3 ಯೋಜನೆಯನ್ನು ಅಣಕಿಸಿದ್ದಾರೆ ಎಂದು ಆರೋಪಿಸಿ ನಟ ಪ್ರಕಾಶ್ ರಾಜ್ ವಿರುದ್ಧ ಬಾಗಲಕೋಟೆ ಜಿಲ್ಲೆಯ ಪೊಲೀಸ್ ಠಾಣೆಯೊಂದರಲ್ಲಿ ದೂರು ದಾಖಲಿಸಲಾಗಿದೆ. ಈ ದೂರನ್ನು ಹಿಂದುತ್ವ ಸಂಘಟನೆಗಳ ನಾಯಕರು ದಾಖಲಿಸಿದ್ದು, ನಟ ಪ್ರಕಾಶ್ ರಾಜ್ ಅವರ ಹೇಳಿಕೆ ಅಸಮಂಜಸವಾಗಿದೆ ಎಂದು ದೂರಿದ್ದಾರೆ.
ಪ್ರಕಾಶ್ ರಾಜ್ ತಮ್ಮ ಎಕ್ಸ್ ಸಾಮಾಜಿಕ ಖಾತೆಯಲ್ಲಿ ಭಾರತದ ಮಹತ್ವಾಕಾಂಕ್ಷಿ ಚಂದ್ರಾನ್ವೇಷಣೆಯ ಭಾಗವಾಗಿ ಹಮ್ಮಿಕೊಂಡಿರುವ ಚಂದ್ರಯಾನ-3 ಯೋಜನೆಯನ್ನು ಅಣಕಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆ ಪೋಸ್ಟ್ ನಲ್ಲಿ, #VikramLander #Justasking ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ, “ಚಂದ್ರಯಾನದಿಂದ ಬಂದಿರುವ ಪ್ರಥಮ ನೋಟ..” ಎಂಬ ಶೀರ್ಷಿಕೆಯೊಂದಿಗೆ ವ್ಯಕ್ತಿಯೊಬ್ಬ ಟೀ ಶರ್ಟ್ ಹಾಗೂ ಲುಂಗಿ ತೊಟ್ಟು ಟೀ ಸುರಿಯುತ್ತಿರುವ ವ್ಯಂಗ್ಯಚಿತ್ರವನ್ನು ನಟ ಪ್ರಕಾಶ್ ರಾಜ್ ಹಂಚಿಕೊಂಡಿದ್ದರು.
ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ನಟ ಪ್ರಕಾಶ್ ರಾಜ್ ವಿರುದ್ಧ ದೂರು ದಾಖಲಾಗಿರುವುದನ್ನು ಪೊಲೀಸರು ದೃಢಪಡಿಸಿದ್ದಾರೆ. ನಟನ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕೆಂದು ದೂರುದಾರರಾದ ಹಿಂದುತ್ವ ಸಂಘಟನೆಗಳ ನಾಯಕರು ಆಗ್ರಹಿಸಿದ್ದಾರೆ.
ಚಂದ್ರಯಾನ-3 ಕುರಿತು ಪೋಸ್ಟ್ ಮಾಡಿದಾಗಿನಿಂದ ನಟ ಪ್ರಕಾಶ್ ರಾಜ್ ಅವರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದು, ಚಂದ್ರಯಾನ-3 ಯೋಜನೆಯು ದೇಶದ ಪಾಲಿಗೆ ಸಾಂಕೇತಿಕ ಮಹತ್ವ ಹೊಂದಿದೆ ಎಂದು ಪ್ರತಿಪಾದಿಸಿದ್ದಾರೆ.
ತಮ್ಮ ಪೋಸ್ಟ್ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತವಾಗುತ್ತಿರುವ ಆಕ್ರೋಶದ ಕುರಿತು ಪ್ರತಿಕ್ರಿಯಿಸಿರುವ ನಟ ಪ್ರಕಾಶ್ ರಾಜ್, ನನ್ನ ಹೇಳಿಕೆ ಕೇವಲ ತಮಾಷೆಯಾಗಿತ್ತು ಎಂದು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಸ್ಪಷ್ಟಪಡಿಸಿದ್ದಾರೆ. #justasking ಹ್ಯಾಶ್ ಟ್ಯಾಗ್ ನೊಂದಿಗೆ ಪೋಸ್ಟ್ ಮಾಡಿರುವ ಅವರು, “ದ್ವೇಷ ದ್ವೇಷವನ್ನಷ್ಟೇ ನೋಡುತ್ತದೆ.. ನಾನು ಆರ್ಮ್ ಸ್ಟ್ರಾಂಗ್ ಕಾಲಘಟ್ಟದಲ್ಲಿ ನಮ್ಮ ಕೇರಳ ಚಾಯ್ ವಾಲಾಗಳನ್ನು ಸಂಭ್ರಮಿಸುತ್ತಿದ್ದ ಕುರಿತು ಉಲ್ಲೇಖಿಸಿದ್ದು, ಆ ಟ್ರಾಲ್ ಗಳನ್ನು ಯಾವ ಚಾಯ್ ವಾಲಾಗಳು ನೋಡಿದ್ದರು? ನೀವು ತಮಾಷೆಯನ್ನು ತಮಾಷೆಯಾಗಿ ಸ್ವೀಕರಿಸದಿದ್ದರೆ, ಆಗ ನಿಮ್ಮನ್ನೇ ತಮಾಷೆ ಮಾಡಲಾಗುತ್ತದೆ.. ಬೆಳೆಯಿರಿ” ಎಂದು ಕಿವಿಮಾತು ಹೇಳಿದ್ದಾರೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO)ಯ ಪ್ರಕಾರ, ಚಂದ್ರಯಾನ-3 ಯೋಜನೆಯ ಭಾಗವಾಗಿ ಉಡಾವಣೆಗೊಳಿಸಲಾಗಿರುವ ವಿಕ್ರಂ ಲ್ಯಾಂಡರ್ ಆಗಸ್ಟ್ 23ರಂದು ಭಾರತೀಯ ಕಾಲಮಾನ ಸುಮಾರು 18.04ರ ವೇಳೆಗೆ ಚಂದ್ರನ ಮೇಲೆ ಇಳಿಯಲಿದೆ. ಈ ಐತಿಹಾಸಿಕ ಕ್ಷಣದ ನೇರ ಪ್ರಸಾರವು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಜಾಲತಾಣ ಸೇರಿದಂತೆ, ಅದರ ಯೂಟ್ಯೂಬ್ ವಾಹಿನಿ, ಫೇಸ್ ಬುಕ್ ಹಾಗೂ ಸಾರ್ವಜನಿಕ ಪ್ರಸಾರ ಸಂಸ್ಥೆಗಳಾದ ದೂರದರ್ಶನ, ನ್ಯಾಷನಲ್ ಟಿವಿಯಲ್ಲಿ ಅದೇ ದಿನ ಭಾರತೀಯ ಕಾಲಮಾನ 17.27ರ ವೇಳೆಗೆ ಪ್ರಸಾರವಾಗಲಿದೆ ಎಂದು ಹೇಳಿದೆ.
BREAKING NEWS:-
— Prakash Raj (@prakashraaj) August 20, 2023
First picture coming from the Moon by #VikramLander Wowww #justasking pic.twitter.com/RNy7zmSp3G