ಬಿಜೆಪಿ ಹಗರಣಗಳನ್ನು ಬಿಚ್ಚಿಡುತ್ತೇವೆಂಬ ಬೆದರಿಕೆ ತಂತ್ರ ಅನುಸರಿಸುತ್ತಿರುವ ಕಾಂಗ್ರೆಸ್‌ : ಪ್ರಹ್ಲಾದ್‌ ಜೋಶಿ

Update: 2024-09-01 12:19 GMT

ಪ್ರಹ್ಲಾದ್‌ ಜೋಶಿ (PC:x/@JoshiPralhad)

ಹುಬ್ಬಳ್ಳಿ: ರಾಜಕೀಯ ಭ್ರಷ್ಟಾಚಾರವನ್ನು ಬೇರು ಸಮೇತ ಕಿತ್ತೊಗೆಯಲು ಬಿಜೆಪಿ ಬದ್ಧವಾಗಿದ್ದು, ಕಾಂಗ್ರೆಸ್ ಬೆದರಿಕೆ ತಂತ್ರದಿಂದ ಬಿಜೆಪಿಯ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಇಂದು ಮಾದ್ಯಮದವರೊಂದಿಗೆ ಮಾತನಾಡಿದ ಅವರು, "ರಾಜ್ಯದಲ್ಲಿ ವಾಲ್ಮೀಕಿ, ಮುಡಾ ಹಗರಣದ ವಿರುದ್ಧ ಹೋರಾಟ ತಾರ್ಕಿಕ ಆಗುತ್ತಲೇ, ಕಾಂಗ್ರೆಸ್ ನಾಯಕರು ಬಿಜೆಪಿ ಹಗರಣಗಳನ್ನು ಬಿಚ್ಚಿಡುತ್ತೇವೆ ಎಂಬ ಬೆದರಿಕೆ ತಂತ್ರ ಅನುಸರಿಸುತ್ತಿದ್ದಾರೆ" ಎಂದು ಆರೋಪಿಸಿದರು.

ಒಂದೂವರೆ ವರ್ಷ ಏಕೆ ಸುಮ್ಮನಿದ್ದೀರಿ?: ಮುಡಾ ಹಗರಣದಲ್ಲಿ ರಾಜ್ಯಪಾಲರು ಸಿಎಂ ವಿರುದ್ಧ ತನಿಖೆಗೆ ಅನುಮತಿ ನೀಡುತ್ತಲೇ ಕಾಂಗ್ರೆಸ್ ಏನೇನೋ ಬಡಬಡಿಸುತ್ತಿದೆ. ಬಿಜೆಪಿ ಅವಧಿಯಲ್ಲಿ ಭ್ರಷ್ಟಾಚಾರ ಆಗಿದ್ದರೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಒಂದೂವರೆ ವರ್ಷ ಏಕೆ ಸುಮ್ಮನಿದ್ದಿರಿ? ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ವಿರುದ್ಧ ಈಗೇಕೆ ಧ್ವನಿ?: ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಈಗೇಕೆ ಧ್ವನಿ ಎತ್ತುತ್ತಿದ್ದೀರಿ? ಎಚ್‌ಡಿಕೆ ಕೇಸ್ ಇದ್ದದ್ದು 2005-06ರಲ್ಲಿ. 2013ರಲ್ಲಿ ಸಿದ್ದರಾಮಯ್ಯ ಅವರೇ ಸಿಎಂ ಆಗಿದ್ದರು. ಆಗಲೂ ಸುಮ್ಮನಿದ್ದೀರಿ. 2018ರಲ್ಲಿ ಜೆಡಿಎಸ್ ಜತೆ ಸರ್ಕಾರ ರಚಿಸಿದವರು ತಾವೇ. ಆಗಲೂ ಪ್ರಸ್ತಾಪವಿಲ್ಲ. ಈಗ ಅವರನ್ನು ಎಳೆದು ತರುತ್ತಿದ್ದೀರಿ. ಇದು ಬೆದರಿಕೆ ತಂತ್ರವಲ್ಲವೇ? ಎಂದು ಜೋಶಿ ಪ್ರಶ್ನಿಸಿದರು.

ಯಾರೇ ಭ್ರಷ್ಟಾಚಾರ ಎಸಗಿದರೂ ತಪ್ಪೇ. ಎಚ್‌ಡಿಕೆ ಅವರೇ ಆಗಲಿ ಬಿಜೆಪಿಯವರೇ ಇರಲಿ. ಹಗರಣಗಳನ್ನು ಬಿಚ್ಚಿಡಿ ನೋಡೋಣ. ಇಂಥ ಬೆದರಿಕೆಗೆಲ್ಲ ಬಿಜೆಪಿ ಬಗ್ಗಲ್ಲ ಎಂದು ಹೇಳಿದರು.

ಸಿಎಂ ನೈತಿಕವಾಗಿ ರಾಜೀನಾಮೆ ನೀಡಲಿ: ಸಿಎಂ ವಿರುದ್ಧ ತನಿಖೆಗೆ ರಾಜ್ಯಪಾಲರು ಅನುಮತಿ ಕೊಡುತ್ತಲೇ ಕಾಂಗ್ರೆಸ್ ಅವರ ವಿರುದ್ಧ ಹೋರಾಟ ನಡೆಸುತ್ತಿದೆ. ಸಿಎಂ ಮತ್ತು ಕಾಂಗ್ರೆಸ್ ನಾಯಕರು ಸಹನೆ ಕಳೆದುಕೊಂಡಿದ್ದಾರೆ. ಕೋರ್ಟ್ ತೀರ್ಪು ಏನೇ ಬರಲಿ ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ನೈತಿಕವಾಗಿ ರಾಜೀನಾಮೆ ನೀಡಬೇಕು ಎಂದು ಸಚಿವ ಪ್ರಹ್ಲಾದ್ ಜೋಶಿ ಒತ್ತಾಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News