34 ದಿನಗಳ ಬಳಿಕ ರಾಜ್ಯಕ್ಕೆ ಮರಳಿದ ಪ್ರಜ್ವಲ್ ರೇವಣ್ಣ: ವಿಮಾನ ನಿಲ್ದಾಣದಲ್ಲಿಯೇ ಎಸ್‌ಐಟಿ ವಶಕ್ಕೆ
ಬೆಂಗಳೂರು: ಲೈಂಗಿಕ ದೌರ್ಜನ್ಯ, ಅಶ್ಲೀಲ ವಿಡಿಯೋ ಪೆನ್‍ಡ್ರೈವ್ ಸೇರಿ ಮೂರು ಪ್ರಕರಣಗಳ ಸಂಬಂಧ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಗುರುವಾರ ಮಧ್ಯರಾತ್ರಿಗೆ ಬೆಂಗಳೂರಿಗೆ ಆಗಮಿಸಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ ವಿಶೇಷ ತನಿಖಾ ದಳ(ಎಸ್‌ಐಟಿ) ಅಧಿಕಾರಿಗಳು ವಶಕ್ಕೆ ಪಡೆದು ಬಂಧಿಸಿದ್ದಾರೆ.
ಲೋಕಸಭಾ ಚುನಾವಣೆಯ ದಿನ (ಎ.26)ದಂದು ಮತ ಚಲಾಯಿಸಿ ಎ.27ರ ಬೆಳಗ್ಗೆ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದ ಸಂಸದ ಪ್ರಜ್ವಲ್ ರೇವಣ್ಣ ಬರೋಬ್ಬರಿ 34 ದಿನಗಳ ಬಳಿಕ ರಾಜ್ಯಕ್ಕೆ ವಾಪಸ್ಸಾಗಿದ್ದಾರೆ. ಮೇ 30ರ ಮಧ್ಯಾಹ್ನದ ವೇಳೆಗೆ ಜರ್ಮನಿಯ ಮ್ಯೂನಿಕ್ ನಗರದಿಂದ ಲುಫ್ತಾನ್ಸಾ ಏರ್‍ಲೈನ್ಸ್ ಮೂಲಕ ಟಿಕೆಟ್ ಬುಕ್ ಮಾಡಿಕೊಂಡು ಪ್ರಯಾಣ ಬೆಳೆಸಿದ್ದು, ಮಧ್ಯರಾತ್ರಿ 12.30ರ ಸುಮಾರಿಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಸಾಧ್ಯತೆ ಇದ್ದರಿಂದ ಅವರನ್ನು ಬಂಧಿಸಲು ಎಸ್‌ಐಟಿ ಅಧಿಕಾರಿಗಳ ತಂಡ ವಿಮಾನ ನಿಲ್ದಾಣದಲ್ಲಿಯೇ ಮೊಕ್ಕಾಂ ಹೂಡಿತ್ತು.
ಇತ್ತೀಚೆಗಷ್ಟೇ ಪ್ರಜ್ವಲ್ ರೇವಣ್ಣ ವಿಡಿಯೋ ಸಂದೇಶ ಕಳುಹಿಸಿದ್ದರು. ಮೇ 31ರಂದು ಬೆಂಗಳೂರಿಗೆ ಬರಲಿದ್ದು, ಬೆಳಗ್ಗೆ 10 ಗಂಟೆ ಎಸ್‍ಐಟಿ ತನಿಖೆಗೆ ಹಾಜರಾಗುವುದಾಗಿ ಆ ವಿಡಿಯೋದಲ್ಲಿ ಅವರು ಹೇಳಿಕೊಂಡಿದ್ದರು. ಈಗಾಗಲೇ ಅವರ ವಿರುದ್ಧ ಬಂಧನದ ವಾರಂಟ್, ಲುಕ್‍ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಅಲ್ಲದೆ, ಬ್ಲೂ ಕಾರ್ನರ್ ನೋಟಿಸ್ ಸಹ ಜಾರಿಯಲ್ಲಿರುವುದರಿಂದ ಸಿಟ್ ಅಧಿಕಾರಿಗಳು ಆರೋಪಿ ಪ್ರಜ್ವಲ್ ರೇವಣ್ಣನನ್ನು ವಿಮಾನ ನಿಲ್ದಾಣದಲ್ಲೇ ವಶಕ್ಕೆ ಪಡೆಯಲಿದ್ದಾರೆಂದು ಗೊತ್ತಾಗಿದೆ.
‘ಪ್ರಜ್ವಲ್‍ರನ್ನು ವಿಮಾನ ನಿಲ್ದಾಣದಿಂದ ಭದ್ರತಾ ಸಮಸ್ಯೆಯಾಗದಂತೆ ಕರೆತರುವ ನಿಟ್ಟಿನಲ್ಲಿ ಮುಂಜಾಗ್ರತಾ ದೃಷ್ಠಿಯಿಂದ ಎಸ್‍ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಗುರುವಾರ ಸಭೆ ನಡೆಸಿದ್ದು, ಎಸ್‍ಐಟಿ ಅಧಿಕಾರಿಗಳ ಸೂಚನೆ ಮೇರೆಗೆ ವಿಮಾನ ನಿಲ್ದಾಣದ ರಸ್ತೆಯುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಅಲ್ಲದೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2ನಲ್ಲಿ ಸಂಚಾರಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಶುಕ್ರವಾರ ಪ್ರಜ್ವಲ್ ರೇವಣ್ಣ ಅವರನ್ನು ಎಸ್ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.