RTE ಅನ್ವಯ ಸ್ಕೂಲ್ ಮ್ಯಾಪಿಂಗ್ ಸಿದ್ಧಪಡಿಸಿ: ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ. ಒತ್ತಾಯ
ಬೆಂಗಳೂರು, ಸೆ.21: ಆರ್‍ಟಿಇ ಕಾಯ್ದೆ ಅನ್ವಯ ಸ್ಕೂಲ್ ಮ್ಯಾಪಿಂಗ್ ಮಾಡುವಲ್ಲಿ ವಿಫಲವಾಗಿರುವ ಕಾರಣ ಶಾಲಾ ಮಕ್ಕಳು ಸಂಚಾರ ದಟ್ಟಣೆಯ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಹಾಗಾಗಿ ಸ್ಕೂಲ್ ಮ್ಯಾಪಿಂಗ್ ಸಿದ್ಧಪಡಿಸುವಂತೆ ರಾಜ್ಯ ಸರಕಾರಕ್ಕೆ ಅಭಿವೃದ್ಧಿ ಶಿಕ್ಷಣ ತಜ್ಞ ನಿರಂಜನಾರಾಧ್ಯ. ವಿ.ಪಿ. ಒತ್ತಾಯಿಸಿದ್ದಾರೆ.
ಗುರುವಾರ ಪ್ರಕಟನೆ ಹೊರಡಿಸಿರುವ ಅವರು, ಮಕ್ಕಳ ಶಾಲಾ ಪ್ರವೇಶಕ್ಕಾಗಿ ನಗರ ಪ್ರದೇಶಗಳಲ್ಲಿ ನೆರೆಹೊರೆಯನ್ನು ವ್ಯಾಖ್ಯಾನಿಸುವ ಉದ್ದೇಶಕ್ಕಾಗಿ, ಸ್ಥಳೀಯ ಪ್ರಾಧಿಕಾರವು ಆಡಳಿತ ಉದ್ದೇಶಕ್ಕಾಗಿ ಅಧಿಸೂಚಿಸುವ ವಾರ್ಡ್‍ನ ಪ್ರದೇಶವನ್ನು ನೆರೆಹೊರೆ ಎಂದು ನಿಯಮ ಆರ್‍ಟಿಇ ಕಾಯ್ದೆಯಲ್ಲಿ ಸ್ಪಷ್ಟವಾಗಿ ಸೂಚಿಸಿದೆ. ಆದರೆ ಶಿಕ್ಷಣ ಇಲಾಖೆ ಸಮರ್ಪಕವಾಗಿ ಸ್ಕೂಲ್ ಮ್ಯಾಪಿಂಗ್ ಮಾಡಿಲ್ಲ ಎಂದಿದ್ದಾರೆ.
ಟ್ರಾಫಿಕ್ ದಟ್ಟಣೆಯನ್ನು ನಿವಾರಿಸಲು ಶಾಲೆಯ ಸಮಯವನ್ನು ಮರುಪರಿಶೀಲಿಸುವ ಬಗ್ಗೆ ಹೈಕೋರ್ಟ್ ಇತ್ತೀಚೆಗೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದ್ದು, ಶಿಕ್ಷಣ ಇಲಾಖೆಯು ಶಿಕ್ಷಣ ಹಕ್ಕು ಕಾಯಿದೆ ಹಾಗು ನಿಯಮಗಳ ಅವಕಾಶಗಳನ್ನು ಜಾರಿಗೆ ತರಲು ಶಾಲೆಗಳ ವಿವರವಾದ ಮ್ಯಾಪಿಂಗ್(ಸ್ಕೂಲ್ ಮ್ಯಾಪಿಂಗ್) ಸಿದ್ಧಪಡಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಂವಿಧಾನದಲ್ಲಿ ಶಿಕ್ಷಣವು ಮೂಲಭೂತ ಹಕ್ಕಾಗಿದೆ. 2009ರಲ್ಲಿ ಅದನ್ನು ಜಾರಿಗೆ ತರಲು ಕಾನೂನನ್ನು ಜಾರಿಗೊಳಿಸಲಾಯಿತು. ಆರ್‍ಟಿಇ ಕಾಯಿದೆ ಸೆಕ್ಷನ್ 3(1) ರಲ್ಲಿ ಆರರಿಂದ ಹದಿನಾಲ್ಕು ವರ್ಷ ವಯಸ್ಸಿನ ಪ್ರತಿ ಮಗುವಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು ನೆರೆಹೊರೆಯ ಶಾಲೆಯಲ್ಲಿ ಇರುತ್ತದೆ ಎಂದು ಸ್ಪಷ್ಟವಾಗಿ ಹೇಳುತ್ತದೆ. ಅಲ್ಲದೆ 2012ರ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು ನಿಯಮಗಳಲ್ಲಿ ನೆರೆಹೊರೆಯ ವ್ಯಾಖ್ಯಾನವನ್ನು ಸೂಚಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಶಿಕ್ಷಣ ಇಲಾಖೆಯ ಈ ವೈಫಲ್ಯದಿಂದ ನಗರ ಪ್ರದೇಶಗಳಲ್ಲಿ ಶಾಲೆಗಳಿಗೆ ಸುಮಾರು 2 ರಿಂದ 15-20 ಕಿಲೋಮೀಟರ್ ದೂರದವರೆಗೆ ಮಕ್ಕಳು ಪ್ರಯಾಣಿಸಲು ಖಾಸಗಿ ವಾಹನಗಳನ್ನು ಅಪಾರ ಸಂಖ್ಯೆಯಲ್ಲಿ ಬಳಸುವುದರಿಂದ ಸಂಚಾರ ದಟ್ಟಣೆ ಉಂಟಾಗಿದೆ. ಆದುದರಿಂದ ನಗರ ಪ್ರದೇಶದ ವಾರ್ಡ್‍ನಲ್ಲಿರುವ ನೆರೆಹೊರೆಯ ಶಾಲೆಗಳ ಮ್ಯಾಪಿಂಗ್ ಮಾಡಿ, ಅನುಷ್ಠಾನ ಮಾಡುವುದರಿಂದ ಮಕ್ಕಳು ಯಾವುದೇ ಸಾರಿಗೆಯನ್ನು ಅವಲಂಬಿಸದೆ ಮಕ್ಕಳು ತಮ್ಮ ನೆರೆಹೊರೆಯ ಶಾಲೆಗೆ ಕಾಲ್ನಡಿಗೆಯಲ್ಲಿ ನಡೆಯಲು ಅನುವು ಮಾಡಿಕೊಡುತ್ತದೆ. ಇದು ಸಮಸ್ಯೆಗೆ ನಿಜವಾದ ಮತ್ತು ಶಾಶ್ವತ ಪರಿಹಾರವನ್ನು ಒದಗಿಸುತ್ತದೆ ಎಂದು ಸಲಹೆ ನೀಡಿದ್ದಾರೆ.