ಮತದಾರರ ಕರಡು ಪಟ್ಟಿ ಬಿಡುಗಡೆ: ಪರಿಶೀಲನೆ ಹೇಗೆ? ಆಕ್ಷೇಪಣೆ ಸಲ್ಲಿಕೆಗೆ ಕೊನೆಯ ದಿನಾಂಕ ಯಾವಾಗ? ವಿವರ ಇಲ್ಲಿದೆ...

Update: 2023-10-27 15:54 GMT

ಬೆಂಗಳೂರು, ಅ.27: ರಾಜಕೀಯ ಪಕ್ಷಗಳು ತಮ್ಮ ಕಾರ್ಯಕರ್ತರು ಹಾಗೂ ಮತಗಟ್ಟೆ ಮಟ್ಟದ ಪಕ್ಷದ ಏಜೆಂಟರುಗಳ ಮುಖಾಂತರ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆಗೆ ಸಹಕರಿಸಬೇಕು ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದ್ದಾರೆ.

ಶುಕ್ರವಾರ ನಗರದ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ನಡೆದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ರಾಜಕೀಯ ಪಕ್ಷಗಳು ಹೆಚ್ಚಿನ ಕಾರ್ಯಕರ್ತರನ್ನು ಹೊಂದಿರುತ್ತಾರೆ, ನಿಮ್ಮ ಸಹಕಾರದಿಂದ ಅತ್ಯುತ್ತಮ ಪಟ್ಟಿಯನ್ನು ತಯಾರಿಸಲು ಸಹಕಾರವಾಗುತ್ತದೆ ಎಂದರು.

ʼ224 ವಿಧಾನಸಭಾ ಕ್ಷೇತ್ರಗಳಲ್ಲೂ 2024ರ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ಕರಡು ಮತದಾರರ ಪಟ್ಟಿಯಲ್ಲಿ 5,33,77,162 ಮತದಾರರಿದ್ದಾರೆ. 2023ರ ಅಂತಿಮ ಮತದಾರರ ಪಟ್ಟಿಯಲ್ಲಿ 5,08,53,845 ಮತದಾರರು ಇದ್ದರು. 2024ರ ಕರಡು ಮತದಾರರ ಪಟ್ಟಿಯಲ್ಲಿ ಅದು 5,33,77,162 ಏರಿಕೆಯಾಗಿದೆ. ಈ ಪೈಕಿ 2,56,39,736 ಪುರುಷ ಮತದಾರರಿದ್ದರೆ, 2,52,09,619 ಮಹಿಳಾ ಮತದಾರರು ಇದ್ದಾರೆ. 4,896 ಇತರೆ ಮತದಾರರ ಸಂಖ್ಯೆ ಇದೆʼ ಎಂದು ತಿಳಿಸಿದರು.

ʼಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅತಿ ಹೆಚ್ಚು 7,06,207 ಮತದಾರರು ಇದ್ದಾರೆ. 13,45,707 ಯುವ ಮತದಾರರು ಇದ್ದಾರೆ (18-19 ವರ್ಷ), 80 ವರ್ಷ ಮೇಲ್ಪಟ್ಟವರು 11,76,093 ಮತದಾರರು ಇದ್ದಾರೆ. ಕರಡು ಮತದಾರರ ಪಟ್ಟಿ 2024ರ ಪ್ರಕಾರ ಮತಗಟ್ಟೆಗಳು 58,834ಗೆ ಏರಿಕೆಯಾಗಿವೆ. ಆ ಮೂಲಕ 2023ಗಿಂತ 552 ಮತಗಟ್ಟೆ ಏರಿಕೆಯಾಗಿದೆʼ ಎಂದು ಅವರು ಹೇಳಿದರು.

ʼಕರಡು ಮತದಾರರ ಪಟ್ಟಿಯಲ್ಲಿ ಒಟ್ಟು 3,89,353 ಹೆಸರುಗಳನ್ನು ಅಳಿಸಲಾಗಿದ್ದು, ಈ ಪೈಕಿ 1,27,703 ಮರಣದಿಂದ ಅಳಿಸಿದ ಮತದಾರರು ಹಾಗೂ 2,38,617 ಮತದಾರರನ್ನು ಸ್ಥಳಾಂತರದಿಂದ ಅಳಿಸಲಾಗಿದೆ. 2023ರ ವಿಧಾನಸಭೆ ಚುನಾವಣೆ ಬಳಿಕ 6,02,199 ಹೊಸ ಹೆಸರು ಸೇರಿಸಲಾಗಿದೆ. ಇನ್ನು 6,39,995 ಮತದಾರರು ವಿವಿಧ ತಿದ್ದುಪಡಿ ಮಾಡಿದ್ದಾರೆʼ ಎಂದು ಮನೋಜ್ ಕುಮಾರ್ ಮೀನಾ ವಿವರಿಸಿದರು.

ʼಡಿಸೆಂಬರ್ 9ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶʼ

ಮುಂಬರುವ ಲೋಕಸಭೆ ಚುನಾವಣೆ-2024ರ ಪೂರ್ವಭಾವಿ ತಯಾರಿ ಆರಂಭವಾಗಿದ್ದು, ಅ.27ರಂದು ಸಮಗ್ರ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಮತದಾರರು ತಮ್ಮ ಗುರುತಿನ ಚೀಟಿಯಲ್ಲಿ ತಪ್ಪುಗಳಿದ್ದಲ್ಲಿ ಡಿಸೆಂಬರ್ 9ರವರೆಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ. ಅಂತಿಮ ಮತದಾರರ ಪಟ್ಟಿಯನ್ನು ಜ.5, 2024 ರಂದು ಪ್ರಕಟಿಸಲಾಗುವುದು ಎಂದು ಮನೋಜ್ ಕುಮಾರ್ ಮೀನಾ  ತಿಳಿಸಿದರು.

ಕರಡು ಮತದಾರರ ಪಟ್ಟಿಯನ್ನು ಪಿಡಿಎಫ್ ಮಾದರಿಯಲ್ಲಿ ಚುನಾವಣಾ ಆಯೋಗದ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದ್ದು, ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷಗಳ ಕಾರ್ಯಕರ್ತರು ತಮ್ಮ ಹೆಸರುಗಳನ್ನು ಪರಿಶೀಲಿಸಕೊಳ್ಳಬಹುದಾಗಿದೆ, ತಪ್ಪುಗಳಿದ್ದಲ್ಲಿ ಅಥವಾ ಹೆಸರು ಬಿಟ್ಟು ಹೋಗಿದ್ದಲ್ಲಿ ಆಕ್ಷೇಪಣೆ ಸಲ್ಲಿಸಿ ಸರಿಪಡಿಸಬಹುದಾಗಿದೆ ಎಂದು ಹೇಳಿದರು.

ಈ ಹಿಂದೆ ವರ್ಷಕ್ಕೊಮ್ಮೆ ಮಾತ್ರ 18 ವರ್ಷ ತುಂಬಿದ ಯುವ ಮತದಾರರಿಗೆ ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಆದರೆ, 2022ರಿಂದ ವರ್ಷದಲ್ಲಿ ನಾಲ್ಕು ಅವಕಾಶಗಳನ್ನು ನೀಡಲಾಗಿದೆ. ಯುವ ಹಾಗೂ ಹೊಸ ಮತದಾರರ ನೋಂದಣಿಗಾಗಿ ನವೆಂಬರ್ 18 ಮತ್ತು 19 ಹಾಗೂ ಡಿಸೆಂಬರ್ 02 ಮತ್ತು 03 ರಂದು ಶನಿವಾರ ಹಾಗೂ ರವಿವಾರಗಳಂದು ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮನೋಜ್ ಕುಮಾರ್ ಮೀನಾ ತಿಳಿಸಿದರು.

ತಳಮಟ್ಟದಲ್ಲಿ ಮತದಾರರ ಮಾಹಿತಿಯನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಚೆನ್ನಾಗಿ ಅರಿತಿರುತ್ತಾರೆ, ತಮ್ಮ ತಮ್ಮ ವ್ಯಾಪ್ತಿಯಲ್ಲಿನ ಮತದಾರರ ಗುರುತಿನ ಚೀಟಿಗಳಲ್ಲಿ ಸಮಸ್ಯೆಗಳಿದ್ದಲ್ಲಿ, ವಿಳಾಸ ಬದಲಾದಲ್ಲಿ ಅಥವಾ ಹೊಸದಾಗಿ ಸೇರಿಸುವುದು ಸೇರಿದಂತೆ ಮತದಾರರಲ್ಲಿ ಜಾಗೃತಿ ಮೂಡಿಸಬೇಕು. ಈಗ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಂಡಲ್ಲಿ ಚುನಾವಣಾ ಸಮಯದಲ್ಲಿ ಸಮಸ್ಯೆಗಳು ಉದ್ಭವಿಸುವುದಿಲ್ಲ, ಈ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮೀನಾ ಹೇಳಿದರು.

ಪ್ರತಿ ವಿಧಾನಸಭಾ ಕ್ಷೇತ್ರದ ಅಧಿಸೂಚಿತ ನೋಂದಣಾಧಿಕಾರಿ/ಸಹಾಯಕ ನೋಂದಣಾಧಿಕಾರಿಗೆ ನಿಗದಿತ ನಮೂನೆಗಳಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಬೇಕು. ಈ ಅರ್ಜಿಗಳನ್ನು ಮತದಾರರ ಸೇವಾ ಪೋರ್ಟಲ್ ಅಥವಾ ವೋಟರ್ ಹೆಲ್ಪ್ ಲೈನ್ ಮೊಬೈಲ್ ಅಪ್ಲಿಕೇಶನ್ ಬಳಸಿ ಆನ್‍ಲೈನ್ ಮೂಲಕ ಸಲ್ಲಿಸಬಹುದು ಎಂದು ಮನೋಜ್ ಕುಮಾರ್ ಮೀನಾ ತಿಳಿಸಿದರು.

ಸಭೆಯಲ್ಲಿ ಅಪರ ಮುಖ್ಯ ಚುನಾವಣಾಧಿಕಾರಿಗಳಾದ ವೆಂಕಟೇಶ್ ಕುಮಾರ್ ಹಾಗೂ ಕೂರ್ಮಾ ರಾವ್ ಸೇರಿದಂತೆ ಹಿರಿಯ ಅಧಿಕಾರಿಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News