ಸಮಾಜದಲ್ಲಿ ಒಡುಕು ಮೂಡಿಸುವ ಸ್ವಾರ್ಥ ರಾಜಕಾರಣಕ್ಕೆ ಪ್ರಧಾನಿ ಕೈ ಹಾಕಿದ್ದಾರೆ : ದಿನೇಶ್ ಗುಂಡೂರಾವ್

Update: 2024-04-25 16:03 GMT

ಬೆಂಗಳೂರು : ಚುನಾವಣೆ ಗೆಲ್ಲಬೇಕು ಎಂಬ ಒಂದೇ ಕಾರಣಕ್ಕೆ ಹಸಿ ಸುಳ್ಳುಗಳನ್ನ ಹರಡುತ್ತಿರುವ ಪ್ರಧಾನಿ ಮೋದಿ, ಸಮಾಜದಲ್ಲಿ ಒಡುಕು ಮೂಡಿಸುವ ಸ್ವಾರ್ಥ ರಾಜಕಾರಣಕ್ಕೆ ಕೈ ಹಾಕಿದ್ದಾರೆ ಎಂದು ರಾಜ್ಯ ಸರಕಾರದ ಮುಖ್ಯ ವಕ್ತಾರರಾಗಿರುವ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಸ್ಲಿಂ ಮೀಸಲಾತಿ ವಿಚಾರವಾಗಿ ಮೋದಿ ಸುಳ್ಳು ಹೇಳಿದ್ದಾರೆ. ದಲಿತರು, ಹಿಂದುಳಿದವರ ಮೀಸಲಾತಿ ಕಿತ್ತು ಏಲ್ಲಿ ಮುಸ್ಲಿಮರಿಗೆ ನೀಡಲಾಗಿದೆ. ಮೋದಿಯವರು ದಾಖಲೆ ಕೊಡಬೇಕು. ಇಲ್ಲವಾದರೆ ದೇಶದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

10 ವರ್ಷ ಏನು ಕೆಲಸ ಮಾಡದೇ ಅಧಿಕಾರ ಅನುಭವಿಸಿರುವ ಮೋದಿಗೆ ಈಗ ಮುಸ್ಲಿಂ ಮೀಸಲಾತಿ ಎಂಬ ಕಪೋಲ ಕಲ್ಪಿತ ವಿಷಯ ಜ್ಞಾನೋದಯವಾಗಿದೆಯೇ? ಇಷ್ಟು ವರ್ಷ ಸುಮ್ಮನಿದ್ದು ಈಗ ಚುನಾವಣೆ ಸಮಯದಲ್ಲೇ ಸುಳ್ಳು ಹೇಳಿಕೆ ನೀಡುತ್ತಿರುವುದು ಏಕೆ? ಬಹುಮತ ಪಡೆಯುವುದು ಕಷ್ಟ ಎಂಬುದು ಮೋದಿಗೆ ಸ್ಪಷ್ಟವಾದಂತಿದೆ. ಹೀಗಾಗಿ ಈ ರೀತಿ ಸಮಾಜದಲ್ಲಿ ಒಡಕು ಮೂಡಿಸುವ ಹೇಳಿಕೆಗಳನ್ನ ನೀಡುತ್ತಿದ್ದಾರೆ ಎಂದು ಅವರು ಟೀಕಿಸಿದರು.

ದಲಿತರ ಮೀಸಲಾತಿಯನ್ನು ಪರಿಷ್ಕರಿಸುವ ಅಧಿಕಾರ ರಾಜ್ಯ ಸರಕಾರಗಳಿಗಿಲ್ಲ. ಇದಕ್ಕೆ ಸಂಸತ್ತಿನ ಎರಡು ಸದನಗಳ ಒಪ್ಪಿಗೆ ಮೂಲಕ ಕಾಯ್ದೆ ತಿದ್ದುಪಡಿಯಾಗಬೇಕಾಗುತ್ತೆ. ಪ್ರಧಾನಿಯಾದವರು ಈ ಮಟ್ಟಕ್ಕೆ ಸುಳ್ಳು ಹೇಳಬಾರದು. ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ಜಾತಿಗಳ 2ಬಿ ವರ್ಗಕ್ಕೆ ಸೇರಿಸಿದ್ದು 30 ವರ್ಷಗಳ ಹಿಂದಿನ ಕಥೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಚಿನ್ನಪ್ಪ ರೆಡ್ಡಿ ಆಯೋಗದ ವರದಿ ಅನ್ವಯ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ ಗತಿ ಗಳನ್ನ ಗಮನದಲ್ಲಿಟ್ಟುಕೊಂಡು ಅಂದು ಮುಸ್ಲಿಮರನ್ನು 2ಬಿ ವರ್ಗಕ್ಕೆ ಸೇರಿಸಲಾಯಿತು. ಇಲ್ಲಿಯ ವರೆಗೂ ಯಾರು ಇದನ್ನು ಪ್ರಶ್ನೆ ಮಾಡಿಲ್ಲ. ಈಗ ಚುನಾವಣೆ ಸಂದರ್ಭದಲ್ಲಿ ಸಮಾಜದಲ್ಲಿ ಒಡಕು ಮೂಡಿಸಿ ಮತ ಪಡೆಯುವ ಉದ್ದೇಶದಿಂದ ಮೋದಿ ಪ್ರಸ್ತಾಪಿಸಿದ್ದಾರೆ ಎಂದು ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.

ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎನ್ನುತ್ತಿದ್ದ ಮೋದಿ ಈಗ ಹೇಳುತ್ತಿರುವುದು ಏನು? ಅವರ ಹೇಳಿಕೆಗಳನ್ನು ಗಮನಿಸಿದರೆ ಸಬ್ ಕಾ ಸಾಥ್ ಎನ್ನುವುದು ಶುದ್ಧ ಸುಳ್ಳು ಎಂದಾಯ್ತು. ಒಂದು ಕೋಮಿನ ವಿರುದ್ಧ ಹೇಳಿಕೆಗಳನ್ನ ನೀಡುತ್ತಿರುವ ಮೋದಿಗೆ ಸಬ್ ಕಾ ಸಾಥ್ ಎಂದು ಹೇಳುವ ನೈತಿಕತೆ ಇದೆಯಾ? ಎಂದು ಅವರು ಪ್ರಶ್ನಿಸಿದರು.

ಸಮಾಜದಲ್ಲಿ ಬೆಂಕಿ ಹಚ್ಚುವ ಹೇಳಿಕೆಗಳನ್ನು ನೀಡುವುದರಲ್ಲಿ ಮೋದಿಯವರು ಯತ್ನಾಳ್ ರನ್ನು ಮೀರಿಸುವ ಹಂತಕ್ಕೆ ಹೋದಂತಿದೆ. ಸೋಲಿನ ಭೀತಿ ಮೋದಿಯನ್ನು ಕಾಡುತ್ತಿದೆ. ಹೀಗಾಗಿ ಸುಳ್ಳಿನ ಆಶ್ರಯ ಪಡೆಯುತ್ತಿದ್ದಾರೆ. ಯಾವುದೇ ಆಧಾರದವಿಲ್ಲದೆ ದಲಿತರ ಮೀಸಲಾತಿಯನ್ನು ಕಾಂಗ್ರೆಸ್ ಕಡಿತ ಮಾಡುತ್ತಿದೆ ಎಂದು ಹೇಳಿದ್ದಾರೆ. ದಾಖಲೆ ಸಮೇತ ಮಾತನಾಡಲಿ, ಇಲ್ಲವಾದರೆ ದೇಶದ ಜನರ ಕ್ಷಮೆ ಕೇಳಲಿ ಎಂದು ದಿನೇಶ್ ಗುಂಡೂರಾವ್ ಆಗ್ರಹಿಸಿದರು.

ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ನಮ್ಮ ವಿಚಾರದಲ್ಲಿ ಹಸ್ತಕ್ಷೇಪ ಮಾಡುವ ಯಾವ ಅಧಿಕಾರವೂ ಇಲ್ಲ. ಇಷ್ಟು ವರ್ಷದಿಂದ ಆಯೋಗದ ಅಧ್ಯಕ್ಷ ಏನು ಮಾಡುತ್ತಿದ್ದರು? ಕೇವಲ ಗೊಂದಲ ಮೂಡಿಸುವುದಕ್ಕೆ ಮಾತ್ರ ಹೇಳಿಕೆ ಕೊಟ್ಟಿದ್ದಾರೆ. ಅವರು ಮಧ್ಯಪ್ರವೇಶ ಮಾಡುವ ಅವಶ್ಯಕತೆ ಇಲ್ಲ, ನಾವು ಅವರಿಗೆ ಉತ್ತರ ಕೊಡುವ ಅಗತ್ಯವೂ ಇಲ್ಲ ಎಂದು ಅವರು ತಿಳಿಸಿದರು.

ಈ ಹಿಂದೆ ಬಸವರಾಜ ಬೊಮ್ಮಾಯಿ ಈ ವಿಚಾರದಲ್ಲಿ ಕೈ ಹಾಕಿ ಕೈ ಸುಟ್ಟುಕೊಂಡು ಸೋತು ಸುಣ್ಣವಾಗಿ ಹೋಗಿದ್ದಾರೆ. ಇದಕ್ಕೆ ಕೈ ಹಾಕಿ ಕೈ ಸುಟ್ಟುಕೊಂಡೆ ಬಿಜೆಪಿ 65ಕ್ಕೆ ಇಳಿದಿದೆ. ಅವಿವೇಕಿಯ ರೀತಿ ಮಾತನಾಡಿರುವ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಈಗ ಯಾಕೆ ಹಸ್ತಕ್ಷೇಪ ಮಾಡಬೇಕು ಎಂದು ದಿನೇಶ್ ಗುಂಡೂರಾವ್ ಗುಡುಗಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News