ಮಹಿಳಾ ವೈದ್ಯರ ಸುರಕ್ಷತೆಗೆ ಆದ್ಯತೆ: ಡಾ. ಶರಣ್ ಪ್ರಕಾಶ್ ಪಾಟೀಲ್

Update: 2024-08-27 18:11 GMT

ಬೆಂಗಳೂರು: ರಾಜ್ಯ ಸರಕಾರವು ಮಹಿಳಾ ವೈದ್ಯರ ಸುರಕ್ಷತೆಗೆ ಆಧ್ಯತೆ ನೀಡುತ್ತಿದ್ದು, ಪಿಓಎಸ್‍ಹೆಚ್(ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆ, ನಿಷೇಧ ಮತ್ತು ಪರಿಹಾರ) ಕಾಯಿದೆಯನ್ನು ಯಶಸ್ವಿಯಾಗಿ ಅನುಷ್ಟಾನ ಮಾಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.

ಮಂಗಳವಾರ ಇಲ್ಲಿನ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಲೈಂಗಿಕ ದೌರ್ಜನ್ಯದಂಥ ಅಪರಾಧಗಳ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ನಮ್ಮ ವೈದ್ಯಕೀಯ ವೃತ್ತಿಪರರನ್ನು, ವಿಶೇಷವಾಗಿ ಮಹಿಳೆಯರನ್ನು ರಕ್ಷಿಸುವ ವಿಚಾರದಲ್ಲಿ ರಾಜಿ ಪ್ರಶ್ನೆಯೇ ಇಲ್ಲ ಎಂದರು.

ಎಲ್ಲಾ ವೈದ್ಯಕೀಯ ಕಾಲೇಜುಗಳು, ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ನುರಿತ ಭದ್ರತಾ ಸಿಬ್ಬಂದಿ ನಿಯೋಜನೆ ಸೇರಿದಂತೆ ಸಿಸಿಟಿವಿ ಕ್ಯಾಮೆರಾಗಳ ಹೆಚ್ಚಾಗಿ ಅಳವಡಿಸಲಾಗುತ್ತದೆ. ವೈದ್ಯ ಸಿಬ್ಬಂದಿಯ ವಸತಿ ನಿಲಯಗಳ ಸುರಕ್ಷತೆಗೂ ಆದ್ಯತೆ ನೀಡುತ್ತಿದ್ದೇವೆ. ಈ ಕ್ರಮಗಳು ಕೇಂದ್ರ ಸರಕಾರ ಮತ್ತು ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಮಾರ್ಗಸೂಚಿಗಳಿಗೆ ಅನುಗುಣವಾಗಿರಲಿವೆ ಎಂದು ತಿಳಿಸಿದರು.

ಪಿಓಎಸ್‍ಹೆಚ್ ಕಾಯಿದೆಯಡಿ ದೌರ್ಜನ್ಯದ ವಿರುದ್ಧ ಆಂತರಿಕ ದೂರುಗಳ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಗಳ ಎದುರು ಮಹಿಳೆಯರು ಹೇಳಿಕೊಳ್ಳುವ ಎಲ್ಲ ಸಮಸ್ಯೆಗಳನ್ನು ಕಟ್ಟುನಿಟ್ಟಾಗಿ ಪರಿಹರಿಸಲಾಗುತ್ತದೆ ಎಂದು ಅವರು ಹೇಳಿದರು.

ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕಿ ಡಾ. ಸುಜಾತಾ ರಾಥೋಡ್, ಬಿಎಂಸಿ ಮತ್ತು ಆರ್‍ಐನ ಡೀನ್ ಮತ್ತು ನಿರ್ದೇಶಕ ಡಾ. ರಮೇಶ್ ಕೃಷ್ಣ, ಪ್ರಾಂಶುಪಾಲೆ ಡಾ. ಅಸಿಮಾ ಬಾನ್ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸೇರಿ ಇತರರು ಉಪಸ್ಥಿತರಿದ್ದರು.

ದರ್ಶನ್ ವಿಚಾರ ಗಂಭೀರವಾಗಿ ಪರಿಣಿಸಿದೆ: ‘ಜೈಲಿನಲ್ಲಿರುವ ನಟ ದರ್ಶನ್‍ಗೆ ಯಾವುದೇ ವಿನಾಯಿತಿ, ವಿಶೇಷ ಸೌಲಭ್ಯ ಇಲ್ಲ. ಸರಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಕಾನೂನಿಗಿಂತ ಯಾರೂ ದೊಡ್ಡವರಲ್ಲ. ವ್ಯವಸ್ಥೆ ಎಲ್ಲರಿಗೂ ಒಂದೇ. ಜೈಲಿನಲ್ಲಿ ಯಾರಿಗೂ ವಿಶೇಷ ಸೌಲಭ್ಯವಿಲ್ಲ. ಲೋಪಗಳು ಮರುಕಳಿಸದಂತೆ ಗೃಹ ಸಚಿವರು ಈಗಾಗಲೇ ಕ್ರಮ ಕೈಗೊಂಡಿದ್ದಾರೆ’

-ಡಾ.ಶರಣ್ ಪ್ರಕಾಶ್ ಪಾಟೀಲ್, ವೈದ್ಯಕೀಯ ಶಿಕ್ಷಣ ಸಚಿವ




 


Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News