ಪಕ್ಷದ ಪ್ರತಿಯೊಂದು ಬೂತ್ ಗಳನ್ನು ಬಲಪಡಿಸಲು ಆದ್ಯತೆ: ಬಿ.ವೈ.ವಿಜಯೇಂದ್ರ
ಬೆಂಗಳೂರು: ರಾಜ್ಯದ ಪ್ರತಿಯೊಂದು ಬೂತ್ ಅಧ್ಯಕ್ಷರು ಕೂಡ ಪಕ್ಷದ ಜೀವಾಳ. ಪಕ್ಷದ ಎಲ್ಲ ಬೂತ್‍ಗಳನ್ನು ಬಲಪಡಿಸಲು ಆದ್ಯತೆ ನೀಡುವುದಾಗಿ ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ಇಲ್ಲಿನ ಗಾಂಧಿನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಗಾಂಧಿನಗರ ಬೂತ್ 40ರ ಅಧ್ಯಕ್ಷ ಶಶೀಂದ್ರ ಅವರ ಮನೆಗೆ ಭೇಟಿ ಕೊಟ್ಟು ದೀಪಾವಳಿ ಶುಭಾಶಯ ಕೋರಿದ್ದೇನೆ. ರಾಜ್ಯದಲ್ಲಿ 58,282 ಬೂತ್‍ಗಳು ಇವೆ. ಎಲ್ಲ ಬೂತ್‍ಗಳಲ್ಲಿ ಪಕ್ಷದ ಸಂಘಟನೆ ಬಲಪಡಿಸಲಾಗುವುದು ಎಂದು ತಿಳಿಸಿದರು.
ಪ್ರತಿ ಬೂತ್ ಪ್ರಮುಖ ಮತ್ತು ಪಕ್ಷದ ಜೀವಾಳ ಎಂಬುದು ಹಿಂದಿನ ರಾಷ್ಟ್ರೀಯ ಅಧ್ಯಕ್ಷರು ಮತ್ತು ಇಂದಿನ ಕೇಂದ್ರ ಗೃಹ ಸಚಿವರು ಆದ ಅಮಿತ್ ಶಾ, ಇಂದಿನ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರ ಕಲ್ಪನೆ ಮತ್ತು ಚಿಂತನೆಯಾಗಿದೆ. ಅವರ ಚಿಂತನೆಯಂತೆ ಬೂತ್ ಅಧ್ಯಕ್ಷರ ಮನೆಗೆ ಭೇಟಿ ಕೊಡುವ ಮೂಲಕ ಕಾರ್ಯಾರಂಭ ಮಾಡಿದ್ದೇನೆ. ಇಡೀ ರಾಜ್ಯದಲ್ಲಿರುವ ಎಲ್ಲ 58 ಸಾವಿರಕ್ಕೂ ಹೆಚ್ಚು ಬೂತ್‍ಗಳಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸಲು ಹೆಜ್ಜೆ ಇಡುವುದಾಗಿ ತಿಳಿಸಿದರು.
ಪಕ್ಷದ ರಾಷ್ಟ್ರೀಯ ನಾಯಕರು ಬೂತ್ ಅಧ್ಯಕ್ಷರಾಗಿ ಈ ಮಟ್ಟಕ್ಕೆ ಬೆಳೆದುಬಂದಿದ್ದಾರೆ. ಬಿಜೆಪಿ, ರಾಷ್ಟ್ರೀಯ ಅಧ್ಯಕ್ಷರಂತೆ ಬೂತ್ ಅಧ್ಯಕ್ಷರನ್ನೂ ಗೌರವದಿಂದ ಕಾಣುತ್ತದೆ. ಇದೇ ಬಿಜೆಪಿಯ ವಿಶೇಷತೆ ಎಂದು ತಿಳಿಸಿದರು.
ಬಿಜೆಪಿ ಕಾರ್ಯಕರ್ತರು ಹೋರಾಟದಿಂದ ಹಿಂದೆ ಸರಿದ ಉದಾಹರಣೆಗಳಿಲ್ಲ. ನಮ್ಮ ಕಾರ್ಯಕರ್ತರ ರಕ್ತದ ಕಣಕಣದಲ್ಲೂ ಹೋರಾಟದ ಗುಣವಿದೆ. ಕಾಂಗ್ರೆಸ್ ಅಬ್ಬರವನ್ನು ಮೀರಿ ನಮ್ಮ ಪಕ್ಷದ ಕಾರ್ಯಕರ್ತರು ಸಂಘಟನೆ ಮಾಡುತ್ತಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡಲಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಸಂಸದ ಪಿ.ಸಿ.ಮೋಹನ್, ಜಿಲ್ಲಾಧ್ಯಕ್ಷ ಮಂಜುನಾಥ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಇದ್ದರು.