ಎಫ್‌ಐಆರ್ ಆಗಿರುವ ಬಿಜೆಪಿ ನಾಯಕರೂ ರಾಜೀನಾಮೆ ನೀಡಬೇಕು : ಪ್ರಿಯಾಂಕ್ ಖರ್ಗೆ
ಬೆಂಗಳೂರು : "ಚುನಾವಣಾ ಬಾಂಡ್ ವಿಚಾರದಲ್ಲಿ ಸುಲಿಗೆ ಮಾಡಲಾಗುತ್ತಿದೆ ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಕಂಪನಿಗಳ ಮೇಲೆ ಸಿಬಿಐ, ಐಟಿ, ಈ.ಡಿ. ದಾಳಿ ನಡೆದ ಬೆನ್ನಲ್ಲೇ ಚುನಾವಣಾ ಬಾಂಡ್ ಖರೀದಿಯಾಗುತ್ತವೆ. ಬಾಂಡ್ ಖರೀದಿಯಾದ ಬೆನ್ನಲ್ಲೇ ಈ ಪ್ರಕರಣಗಳು ತಣ್ಣಗಾಗುತ್ತವೆ" ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ರವಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇದರ ವಿರುದ್ಧ ನಮ್ಮ ರಾಜ್ಯದ ಜನಾಧಿಕಾರ ಸಂಘರ್ಷ ಪರಿಷತ್ ಎಂಬ ಎನ್‍ಜಿಓ ನ್ಯಾಯಾಲಯದ ಮೆಟ್ಟಿಲೇರಿ ಈ ಸುಲಿಗೆ ಪ್ರಕರಣದಲ್ಲಿ ಎಫ್‍ಐಆರ್ ದಾಖಲಿಸಲು ಅವಕಾಶ ನೀಡಬೇಕು ಎಂದು ಮನವಿ ಸಲ್ಲಿಸಿತ್ತು ಎಂದು ಹೇಳಿದರು.
ಈ ಪ್ರಕರಣದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಈ.ಡಿ ಅಧಿಕಾರಿಗಳು, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಹಾಲಿ ರಾಜ್ಯಾಧ್ಯಕ್ಷ ವಿಜಯೇಂದ್ರ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ವಿರುದ್ಧ ಎಫ್‍ಐಆರ್ ದಾಖಲಿಸಲು ನ್ಯಾಯಾಲಯ ಅವಕಾಶ ನೀಡಿದೆ. ಅದರಲ್ಲಿ ಚುನಾವಣಾ ಬಾಂಡ್ ಅಸಂವಿಧಾನಿಕವಾಗಿದ್ದು, ಇದರಲ್ಲಿ ಆರೋಪಿಯಾಗಿರುವವರು ಕ್ರಿಮಿನಲ್ ಆರೋಪಿಗಳಾಗಿದ್ದು, ಇವರ ವಿರುದ್ಧ ಸೂಕ್ತ ತನಿಖೆ ನಡೆಯಬೇಕೆಂದು ಸ್ಪಷ್ಟವಾಗಿ ತಿಳಿಸಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಬಿಜೆಪಿ ನಾಯಕರು ಕಳೆದ ಮೂರ್ನಾಲ್ಕು ದಿನಗಳಿಂದ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಹೇಳಿಕೆ ನೀಡುತ್ತಿದ್ದಾರೆ. ಈಗ ಅವರದೇ ಪಕ್ಷದ ನಾಯಕರ ವಿರುದ್ಧ ಎಫ್‍ಐಆರ್ ಆಗಿದೆ. ಅವರು ಕೂಡ ರಾಜೀನಾಮೆ ನೀಡಬೇಕಲ್ಲವೇ? ಎಂದು ಅವರು ಪ್ರಶ್ನಿಸಿದರು.
ಬಿಜೆಪಿಗೆ 572 ಕೋಟಿ ರೂ.ಚುನಾವಣಾ ಬಾಂಡ್ ಖರೀದಿ ಮಾಡಿರುವ 33 ಕಂಪನಿಗಳು ಶೂನ್ಯ ಲಾಭದಲ್ಲಿವೆ. ಈ ಎಲ್ಲ ಕಂಪನಿಗಳ ಒಟ್ಟಾರೆ ನಷ್ಟದ ಪ್ರಮಾಣ 1 ಲಕ್ಷ ಕೋಟಿ ರೂ.ಗಳಷ್ಟಿದೆ. ಇನ್ನು 6 ಕಂಪನಿಗಳು ಲಾಭಕ್ಕಿಂತ ಹೆಚ್ಚಿನ ಪ್ರಮಾಣದ ದೇಣಿ(646 ಕೋಟಿ ರೂ.)ಗೆ ನೀಡಿವೆ. 3 ಕಂಪನಿಗಳು ಲಾಭಾಂಶ ಇದ್ದರೂ ನಷ್ಟ ತೋರಿಸಿದ್ದಾರೆ. ಇವರು ಬಿಜೆಪಿಗೆ 193 ಕೋಟಿ ರೂ.ದೇಣಿಗೆ ನೀಡಿದ್ದಾರೆ ಎಂದು ಅವರು ಹೇಳಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಇಷ್ಟು ವರ್ಷದಿಂದ ಕೇಂದ್ರದ ಮಂತ್ರಿಯಾಗಿದ್ದಾರೆ. ರಾಜ್ಯಕ್ಕೆ ಒಂದು ಒಳ್ಳೆಯ ಕೆಲಸ ಮಾಡಿದ್ದೀನಿ ಎಂದು ಹೇಳಿಕೊಳ್ಳಲು ಅವರಿಗೆ ಸಾಧ್ಯವೇ? ಕೇವಲ ಸಮಾಜದಲ್ಲಿ ಕೋಮಿನ ವಿಷ ಬೀಜ ಬಿತ್ತಿ, ಅನಗತ್ಯ ಹೇಳಿಕೆ ನೀಡುತ್ತಾರೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹೆಸರನ್ನು ಇವರಷ್ಟು ಜಪ ಬೇರೆ ಯಾರೂ ಮಾಡುವುದಿಲ್ಲ ಎಂದು ಅವರು ಟೀಕಿಸಿದರು.
ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ವಿರುದ್ಧ ಮನಿ ಲಾಂಡರಿಂಗ್ ಆರೋಪ ಮಾಡಿರುವ ಪ್ರಹ್ಲಾದ್ ಜೋಶಿ ಅವರೇ, 10 ವರ್ಷಗಳಿಂದ ನೀವೇ ಅಧಿಕಾರದಲ್ಲಿದ್ದೀರಿ. ಇಷ್ಟು ವರ್ಷ ಬೆಟ್ಟು ಚೀಪುತ್ತಾ ಕೂತಿದ್ದೀರಾ? ನಿಮ್ಮ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಕೂಡ ಹಣಕಾಸು ಅವ್ಯವಹಾರದ ಆರೋಪಿಯಾಗಿದ್ದಾರೆ. ಶೆಲ್ ಕಂಪನಿ ಮೂಲಕ ಹಣಕಾಸು ಅವ್ಯವಹಾರ ಮಾಡಿರುವ ಪ್ರಕರಣ ಐಟಿ, ಈಡಿ ಸಂಸ್ಥೆಯ ಮುಂದೆ ಇರುವುದು ಮರೆತಿದ್ದೀರಾ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಮೋದಿ ಅವರ ಸಂಪುಟದಲ್ಲಿ 23 ಸಚಿವರ ಮೇಲೆ ಎಫ್‍ಐಆರ್ ದಾಖಲಾಗಿದ್ದು, ಕುಮಾರಸ್ವಾಮಿ ಅವರೂ ಸೇರಿದಂತೆ ಇವರೆಲ್ಲರೂ ತಮ್ಮ ಪ್ರಕರಣದಲ್ಲಿ ಎ1 ಆಗಿದ್ದಾರೆ. 2011ರ ಡಿನೋಟಿಫಿಕೇಶನ್ ಪ್ರಕರಣದಲ್ಲಿ ವಿರೋಧ ಪಕ್ಷದ ನಾಯಕ ಅಶೋಕ್ ಎ1 ಆಗಿದ್ದಾರೆ. ಎ2 ಪೂಜ್ಯ ಅಪ್ಪಾಜಿ ಅವರಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದರು.
ಹುಬ್ಬಳ್ಳಿಯಲ್ಲಿ ಒಂದು ಕೊಲೆ ಪ್ರಕರಣ ನಡೆದಾಗ ಬಹಳ ಆಸಕ್ತಿಯಿಂದ ದಿನನಿತ್ಯ ಬಂದು ಮಾಧ್ಯಮಗಳ ಮುಂದೆ ಕೂರುತ್ತಿದ್ದ ನೀವು, ಯಡಿಯೂರಪ್ಪ ಮೇಲೆ ಫೊಕ್ಸೊ ಪ್ರಕರಣ ದಾಖಲಾದಾಗ ಯಾಕೆ ಸುಮ್ಮನಾದಿರಿ? ಮುನಿರತ್ನ ಪ್ರಕರಣದಲ್ಲಿ ಮೌನವಾಗಿದ್ದು ಯಾಕೆ? ಎಂದು ಅವರು ವಾಗ್ದಾಳಿ ನಡೆಸಿದರು.
ಬಿಜೆಪಿ ನಾಯಕರು ಮುನಿರತ್ನ ಸಮರ್ಥನೆ ಮಾಡಿಕೊಳ್ಳುವುದನ್ನು ನೋಡಿದರೆ ನಿಮ್ಮದು ಸಿಡಿ ಏನಾದರೂ ಇದೆಯೇ? ನೀವು ನೈತಿಕತೆ ಬಗ್ಗೆ ಮಾತನಾಡುತ್ತೀರಾ? ವೇದಿಕೆ ಮೇಲೆ ದಮ್ಮು, ತಾಕತ್ತು ಎಂದು ಹೇಳಿ ಚುನಾವಣೆ ಸೋತಿರಿ. ಈಗ ನಿಮ್ಮ ಆ ದಮ್ಮು ತಾಕತ್ತು ಎಲ್ಲಿ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಬಿಜೆಪಿ ಕಾಲದಲ್ಲಿ ನಡೆದ ದೇವರಾಜ ಅರಸು ಟ್ರಕ್ ಟರ್ಮಿನಲ್ ಹಗರಣದ ಹಣ ದಿಲ್ಲಿಗೆ ಹೋಗಿದೆ. ಒಂದು ವಾರದಲ್ಲಿ ಅದನ್ನು ನಿಮ್ಮ ಮುಂದೆ ಇಡುತ್ತೇವೆ. ಛಲವಾದಿ ನಾರಾಯಣಸ್ವಾಮಿ ಬಗ್ಗೆ ಯಾಕೆ ಮೌನ? ಮೇಲ್ಮನೆ ವಿಪಕ್ಷ ನಾಯಕರು ದಲಿತ ಮಕ್ಕಳಿಗೆ ಶಿಕ್ಷಣ ನೀಡುವುದಾಗಿ ಹೇಳಿ ಬಿರಿಯಾನಿ ಅಂಗಡಿ ತೆರೆದಿದ್ದಾರೆ. ಇದರ ಬಗ್ಗೆ ಬಿಜೆಪಿ ಯಾಕೆ ಮಾತನಾಡುವುದಿಲ್ಲ? ಎಂದು ಅವರು ಕಿಡಿಗಾರಿದರು.
ಬಿಜೆಪಿಯವರು ರಾಜ್ಯಪಾಲರ ಮೂಲಕ ಏನೆಲ್ಲಾ ಆಟ ಆಡುತ್ತೀರೋ ಆಡಿ ನಾವು ಅದನ್ನು ಕಾನೂನಾತ್ಮಕವಾಗಿ ಎದುರಿಸುತ್ತೇವೆ. ನಾವು ಇದಕ್ಕೆಲ್ಲ ಅಂಜುವುದಿಲ್ಲ. ನೈತಿಕತೆ ಬಗ್ಗೆ ಮಾತನಾಡುವ ನಿಮಗೆ ನೈತಿಕತೆ ಇದ್ದರೆ, ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರನ್ನು ಪಕ್ಷದಿಂದ ಆಚೆ ಹಾಕಿ. ನಿಮಗೆ ಆ ದಮ್ಮು ತಾಕತ್ತು ಇದೆಯಾ? ಎಂದು ಅವರು ಸವಾಲು ಹಾಕಿದರು.