ಸಿಎಂ ವಿರುದ್ಧ ಪ್ರಾಸಿಕ್ಯೂಷನ್ | ರಾಜಭವನವನ್ನು ದುರ್ಬಳಕೆ ಮಾಡಿಕೊಂಡಿರುವುದು ಸ್ಪಷ್ಟ : ಬಿ.ಕೆ ಹರಿಪ್ರಸಾದ್
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ರಾಜಕೀಯ ದ್ವೇಷದಿಂದ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವ ಮೂಲಕ ರಾಜಭವನವನ್ನು ದುರ್ಬಳಕೆ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ ಎಂದು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಸಿಎಂ ವಿರುದ್ಧದ ಪ್ರಾಸಿಕ್ಯೂಷನ್ ನೀಡಿರುವ ರಾಜ್ಯಪಾಲರ ಕ್ರಮವನ್ನು ಟೀಕಿಸಿರುವ ಬಿ.ಕೆ ಹರಿಪ್ರಸಾದ್ ಅವರು,"ಜನರಿಂದ ಆಯ್ಕೆಯಾದ ಸರ್ಕಾರಗಳನ್ನು ಹಾಗೂ ಮುಖ್ಯಮಂತ್ರಿಗಳನ್ನು ಅಸ್ಥಿರಗೊಳಿಸುವ ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ದ್ವೇಷಕ್ಕೆ ಜನರೇ ಕಳೆದ ಲೋಕಸಭೆಯಲ್ಲಿ ಉತ್ತರ ಕೊಟ್ಟಾಗಿದೆ. ಆದರೂ ಕೂಡ ಬಿಜೆಪಿ ಮತ್ತು ಮೋದಿ ಸರ್ಕಾರ ಬುದ್ಧಿ ಕಲಿಯುವ ಲಕ್ಷಣಗಳಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ದಲಿತ-ಹಿಂದುಳಿದವರ ಹಾಗೂ ಬಡವರ ಪರವಾಗಿ ಕಾರ್ಯಕ್ರಮಗಳನ್ನು ನೀಡುವ ವಿಪಕ್ಷದ ಸರ್ಕಾರಗಳನ್ನು ಅಸ್ಥಿರಗೊಳಿಸುವ ಪ್ರಜಾಪ್ರಭುತ್ವ ವಿರೋಧಿ ನಡೆಯ ವಿರುದ್ಧ ಜನರು ತಕ್ಕ ಉತ್ತರ ನೀಡಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲಿನ ದ್ವೇಷದ ಪ್ರಕರಣವನ್ನು ಕಾನೂನು ವ್ಯವಸ್ಥೆಯ ಮೂಲಕವೇ ಉತ್ತರ ನೀಡುತ್ತೇವೆ" ಎಂದು ಹೇಳಿದ್ದಾರೆ.