ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲರ ವಿರುದ್ಧ ಸಾಹಿತಿ-ಕಲಾವಿದರ ಪ್ರತಿಭಟನೆ

Update: 2024-08-19 18:30 GMT

ಬೆಂಗಳೂರು: ಪ್ರಜಾಸತ್ತಾತ್ಮಕವಾಗಿ ಆಯ್ಕೆ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲರ ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ಖಂಡಿಸಿ ‘ಪ್ರಜಾಪ್ರಭುತ್ವಕ್ಕಾಗಿ ನಾವು-ಸಮಾನ ಮನಸ್ಕರರು ವೇದಿಕೆ’ಯಿಂದ ನಗರದ ಫ್ರೀಡಂಪಾರ್ಕ್‍ನಲ್ಲಿ ಸಾಹಿತಿಗಳು, ಕಲಾವಿದರು, ಚಿಂತಕರು, ಸಾಮಾಜಿಕ ಕಾರ್ಯಕರ್ತರು ಪ್ರತಿಭಟನೆ ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಹಿರಿಯ ಪತ್ರಕರ್ತೆ ಡಾ.ವಿಜಯಮ್ಮ, ‘ಅಸಂವಿಧಾನಿಕವಾಗಿ ರಾಜ್ಯದ ಮೇಲೆ ಕಣ್ಣು ಹಾಕಿರುವ ಮತ್ತು ಇಲ್ಲದ ಕಾರಣವನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯರನ್ನು ಪಲ್ಲಟಗೊಳಿಸುವ ಕೆಲಸವನ್ನು ರಾಜ್ಯಪಾಲರ ಮೂಲಕ ಮನುವಾದಿ ಮನಸ್ಥಿತಿಗಳು ಮಾಡುತ್ತಿವೆ. ಮನುವಾದಿಗಳ ತಾಳಕ್ಕೆ ಕುಣಿಯುತ್ತಾ, ಅವರು ಹೇಳಿದ ಹಾಗೆ ಬಾಲಂಗೋಚಿಯಾಗಿ ನಡೆದುಕೊಳ್ಳುತ್ತಿರುವ ರಾಜ್ಯಪಾಲರ ನಡೆಗೆ ನಮ್ಮ ವಿರೋಧವಿದೆ ಎಂದು ತಿಳಿಸಿದರು.

‘ರಾಜ್ಯಪಾಲರಿಗೆ ವಿವೇಚನೆ ಇರಬೇಕಿತ್ತು. ಯಾರದೊ ಕೈಯಲ್ಲಿ ಹೇಳಿಸಿಕೊಂಡು ನಡೆಯುವುದಾದರೆ, ಇಂತಹ ರಾಜ್ಯಪಾಲರು ನಮಗೆ ಅವಶ್ಯಕತೆ ಇಲ್ಲ. ರಾಜ್ಯಗಳ ಮೇಲೆ ಕಣ್ಗಾವಲು ಇಟ್ಟಹಾಗೆ ರಾಜ್ಯಪಾಲರನ್ನು ನೇಮಕ ಮಾಡುವ ಕೇಂದ್ರ ಸರಕಾರ ಬಿಜೆಪಿಯೇತರ ರಾಜ್ಯಗಳ ಸರಕಾರಗಳನ್ನು ಕೆಡುವುದಕ್ಕೆ ರಾಜ್ಯಪಾಲರನ್ನು ಬಳಸಿಕೊಂಡಿದ್ದಾರೆ. ಕರ್ನಾಟಕದಲ್ಲಿ ನಿಮ್ಮ ಆಟ ನಡೆಯುವುದಿಲ್ಲ. ನೀವು ಎಚ್ಚರ ತಪ್ಪಿ ನಡೆದರೆ, ನಿಮಗೆ ಪಾಠ ಕಲಿಸುವುದು ಗೊತ್ತಿದೆ ಎಂದು ಡಾ.ವಿಜಯಮ್ಮ ಎಚ್ಚರಿಕೆ ನೀಡಿದರು.

ಹಿರಿಯ ಸಾಹಿತಿ ಡಾ.ಅರವಿಂದ ಮಾಲಗತ್ತಿ ಮಾತನಾಡಿ, ‘ಬಿಜೆಪಿ ಸರಕಾರ ನಾವು ಸಂವಿಧಾನ ಪರ ಇದ್ದೇವೆಂದು ಹೇಳಿ ಸಂವಿಧಾನಾತ್ಮಕವಾಗಿ ಅಧಿಕಾರಕ್ಕೆ ಬಂದವರ ಮೇಲೆ ಅಸಂವಿಧಾನಿಕವಾಗಿ ಷಡ್ಯಂತ್ರ ರಾಜಕಾರಣ ನಡೆಸುತ್ತಾ, ಸಂವಿಧಾನಕ್ಕೆ ಕೊಡುವ ಗೌರವ ಇದು ಎಂದು ಅವರು ತೋರಿಸಿಕೊಡುತ್ತಿದ್ದಾರೆ. ಸಂವಿಧಾನದ ಮೇಲೆ ಗೌರವಿಲ್ಲದೆ ರಾಜಕೀಯ ವ್ಯವಸ್ಥೆ ದೇಶವನ್ನೆ ಬುಡಮೇಲು ಕೆಲಸ ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ದೇಶದ ಸ್ವಾಯತ್ತ ಸಂಸ್ಥೆಗಳು ರಬ್ಬರ್ ಸ್ಟ್ಯಾಂಪ್ ಹಾಗೆ ಕೆಲಸ ಮಾಡುತ್ತಿವೆ. ಅಷ್ಟೆ ಅಲ್ಲದೇ ದೇಶÀದಲ್ಲಿ ಎಲ್ಲೆಲ್ಲಿ ಬಿಜೆಪಿಯೇತರ ಸರಕಾರಗಳಿವೆಯೋ ಆ ಎಲ್ಲ ಸರಕಾರಗಳ ವ್ಯವಸ್ಥೆ ಬುಡಮೇಲು ಮಾಡುವ ಕುತಂತ್ರ ನೋಡಿದಾಗ, ಅಘೋಷಿತವಾದ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ ಎಂದು ಭಾಸವಾಗುತ್ತದೆ. ಇದು ಸಾಮಾನ್ಯ ಜನರನ್ನು ಉಸಿರುಗಟ್ಟಿಸುತ್ತಿದೆ. ಜನ ಇಂತಹ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತದೇ ಬಿಡುವುದಿಲ್ಲ. ರಾಜ್ಯಪಾಲರು ಮಾಡಿರುವ ತಪ್ಪನ್ನು ತಿದ್ದುಕೊಳ್ಳದೇ ಹೋದರೆ, ಜನ ದಂಗೆ ಏಳುತ್ತಾರೆ ಎಂದು ಅರವಿಂದ ಮಾಲಗತ್ತಿ ಎಚ್ಚರಿಸಿದರು..

ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ಎಲ್.ಎನ್.ಮುಕುಂದರಾಜ್ ಮಾತನಾಡಿ, ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳು ಬೇಸರ ಪಡೆಸುತ್ತಿವೆ. ಸಿದ್ದರಾಮಯ್ಯರ ಮೇಲೆ ರಾಜ್ಯಪಾಲರು ವಿಚಾರಣೆಗೆ ಆದೇಶ ಮಾಡುವ ಮೂಲಕ ಮಲಗಿರುವ ಕನ್ನಡಿಗರನ್ನು ಎಚ್ಚರಿಸಿದ್ದಾರೆ. ಸಂವಿಧಾನವನ್ನು ಕಾಪಾಡುವುದು ಕನ್ನಡಿಗರ ರಕ್ತಗತ ಗುಣ. ಯಾವುದೆ ವ್ಯಕ್ತಿ ಸಂವಿಧಾನ ವಿರೋಧಿಯಾದರೆ, ಜನ ಅಂತವರ ವಿರುದ್ಧ ದಂಗೇಳುತ್ತಾರೆ. ಒಂದು ವರ್ಷದಿಂದೀಚಿಗೆ ರಾಜ್ಯದಲ್ಲಿ ಮಳೆ-ಬೆಳೆ ಉತ್ತಮವಾಗಿತ್ತು, ಕನ್ನಡಿಗರು ಬಹಳ ನೆಮ್ಮದಿಯಿಂದ ಇದ್ದರು. ನೆಮ್ಮದಿಯಾಗಿರುವುದನ್ನು ಜಾತಿವಾದಿ, ಕೋಮುವಾದಿ ವ್ಯಕ್ತಿಗಳಿಗೆ ಸಹಿಸಿಕೊಳ್ಳುವುದಕ್ಕಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯಪಾಲರು ಯಾರು? ಎಲ್ಲಿಂದ ಬಂದವರು? ಎಲ್ಲಿಯೂ ಜಾಗ ಸಿಗದ ಕಾರಣ ನಮ್ಮ ರಾಜ್ಯಕ್ಕೆ ಬಂದಿದ್ದಾರೆ. ಕನ್ನಡಿಗರ ಆಶ್ರಯದಲ್ಲಿ, ನೆಲದಲ್ಲಿದ್ದಾರೆ. ಅಷ್ಟೆ ಅಲ್ಲದೆ ರಾಜ್ಯಪಾಲರು ಕನ್ನಡಿಗರ ಅನ್ನ-ನೀರು ಕುಡಿದು ತಿಂದು ನಮ್ಮ ಆಶ್ರಯ ಪಡೆದುಕೊಂಡ ಇವರು ನಮ್ಮ ನಾಯಕರನ್ನು ಕೆದಕುವುದು ಎಂದರೆ ಏನು ಅರ್ಥ? ಕನ್ನಡಿಗರು ಬಹಳ ಸ್ವಾಭಿಮಾನಿಗಳು. ಕನ್ನಡಿಗರು ರಾಜ್ಯಪಾಲರನ್ನು ಸುಮ್ಮನೆ ಬಿಡುವುದಿಲ್ಲ. ರಾಜ್ಯಪಾಲರು ಕೂಡಲೆ ನಿರ್ಧಾರದಿಂದ ಹಿಂದೆ ಸರಿಯಬೇಕು. ನೆಮ್ಮದಿಯಾಗಿರುವ ಕನ್ನಡಿಗರನ್ನು ನೆಮ್ಮದಿಯಾಗಿರುವುದಕ್ಕೆ ಬಿಡಬೇಕು ಎಂದು ಮುಕುಂದರಾಜ್ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಹಿರಿಯ ಪತ್ರಕರ್ತ ದಿನೇಶ್ ಅಮಿನ್‍ಮಟ್ಟು, ಶಿಕ್ಷಣ ತಜ್ಞ ಬಿ.ಶ್ರೀಪಾದ್ ಭಟ್, ಗಾಯಕ ಪಿಚ್ಚಳ್ಳಿ ಶ್ರೀನಿವಾಸ್, ಕೆ.ಎಸ್.ವಿಮಲಾ, ಪ್ರೊ.ರಾಜಪ್ಪ ದಳವಾಯಿ, ಡಾ.ಬಂಜಗೆರೆ ಜಯಪ್ರಕಾಶ್, ಜಾಣಗೆರೆ ವೆಂಕಟರಾಮಯ್ಯ, ಡಾ.ವಸುಂಧರ ಭೂಪತಿ, ಎ.ಆರ್.ಗೋವಿಂದಸ್ವಾಮಿ, ಕೆ.ವಿ.ನಾಗರಾಜಮೂರ್ತಿ, ನಾಗೇಶ್ ಅರಳಕುಪ್ಪೆ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News