ಜ.23ಕ್ಕೆ ಪಿಎಸ್ಐ ಮರುಪರೀಕ್ಷೆ: ಬೆಂಗಳೂರಿನ 117 ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಭದ್ರತೆ
ಬೆಂಗಳೂರು: ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) ನೇರ ನೇಮಕಾತಿ ಮರುಪರೀಕ್ಷೆಯು ಮಂಗಳವಾರ (ಜ.23) ಬೆಂಗಳೂರು ನಗರದ 117 ಕೇಂದ್ರಗಳಲ್ಲಿ ನಡೆಯಲಿದೆ. ಪರೀಕ್ಷೆಯಲ್ಲಿ ಯಾವುದೇ ಅಕ್ರಮಕ್ಕೆ ಆಸ್ಪದ ಕೊಡಬಾರದೆಂಬ ಉದ್ದೇಶದಿಂದ ಬಿಗಿ ಪೊಲೀಸ್ ಭದ್ರತಾ ವ್ಯವಸ್ಥೆ ಮಾಡಿದ್ದು, ಈಗಾಗಲೇ ಸೂಚಿಸಿಸುವಂತೆ ಅಭ್ಯರ್ಥಿಗಳು ವಸ್ತ್ರ ಸಂಹಿತೆಯನ್ನು ಪಾಲಿಸಬೇಕೆಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ತಿಳಿಸಿದ್ದಾರೆ.
ಸೋಮವಾರ ಪ್ರಕಟನೆ ಹೊರಡಿಸಿರುವ ಅವರು, ಪರೀಕ್ಷೆಯು ಬೆಳಗ್ಗೆ 10.30ರಿಂದ ಮಧ್ಯಾಹ್ನ 12ರ ವರೆಗೆ ಮತ್ತು ಮಧ್ಯಾಹ್ನ 1 ಗಂಟೆಯಿಂದ 2.30ರ ವರೆಗೆ ನಡೆಯಲಿದ್ದು, ಪ್ರತಿ ಪರೀಕ್ಷಾ ಕೇಂದ್ರದಲ್ಲೂ ನಾಲ್ವರು ಸಶಸ್ತ್ರ ಪೇದೆಗಳು ಮತ್ತು ಇಬ್ಬರು ಮಹಿಳಾ ಸಿಬ್ಬಂದಿ ಸೇರಿದಂತೆ 6 ಮಂದಿಯನ್ನು ನಿಯೋಜಿಸಲಾಗಿದೆ.
ಒಟ್ಟಾರೆಯಾಗಿ 40 ಬೆಟಾಲಿಯನ್ ಪೊಲೀಸರನ್ನು ಪರೀಕ್ಷಾ ಕರ್ತವ್ಯಕ್ಕೆ ತೆಗೆದುಕೊಳ್ಳಲಾಗಿದ್ದು, 54 ಸಾವಿರ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ನಗರವನ್ನು ಹೊರತುಪಡಿಸಿ ರಾಜ್ಯದ ಬೇರಾವ ಭಾಗದಲ್ಲೂ ಈ ಪರೀಕ್ಷಾ ಕೇಂದ್ರಗಳು ಇರುವುದಿಲ್ಲ ಎಂದು ಹೇಳಿದ್ದಾರೆ.
ಪರೀಕ್ಷಾ ಕೇಂದ್ರಗಳ ಸುತ್ತ ಅನುಮಾನಾಸ್ಪದವಾಗಿ ಓಡಾಡುವವರು, ಗಾಳಿಸುದ್ದಿ ಹಬ್ಬಿಸುವ ಕಿಡಿಗೇಡಿಗಳು ಮತ್ತು ಜೆರಾಕ್ಸ್ ಅಂಗಡಿಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಡಲಿದ್ದಾರೆ. ಜೊತೆಗೆ, ಪರೀಕ್ಷೆಗೆ ಹಾಜರಾಗುವ ಪ್ರತಿಯೊಬ್ಬರನ್ನೂ ಲೋಹಶೋಧಕ ಯಂತ್ರದ ಮೂಲಕ ತಪಾಸಣೆ ನಡೆಸಲಾಗುವುದು. ಜತೆಗೆ, ಪರೀಕ್ಷಾ ಕೇಂದ್ರಗಳಿಗೆ ಹಿರಿಯ ಪೊಲೀಸ್ ಅಧಿಕಾರಿಗಳೂ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
ಅಭ್ಯರ್ಥಿಗಳು ವಸ್ತ್ರ ಸಂಹಿತೆಯಲ್ಲಿನ ಸೂಚನೆಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಎಲೆಕ್ಟ್ರಾನಿಕ್ ಸಾಧನಗಳನ್ನು ತರುವುದನ್ನಾಗಲಿ, ಮೊಬೈಲ್ ಇಟ್ಟುಕೊಂಡು ಬರುವುದನ್ನಾಗಲಿ ನಿಷೇಧಿಸಲಾಗಿದೆ. ಇದಲ್ಲದೆ ಇನ್ನೂ ಹಲವು ಸೂಚನೆಗಳನ್ನು ಈಗಾಗಲೇ ಅಭ್ಯರ್ಥಿಗಳ ಗಮನಕ್ಕೆ ತರಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.