ಪಿಎಸ್‌ಐ ನೇಮಕಾತಿ ಮರು ಪರೀಕ್ಷೆ; ಅಭ್ಯರ್ಥಿಗಳು ಆತಂಕಪಡುವುದು ಬೇಡ: ಗೃಹ ಸಚಿವ ಜಿ.ಪರಮೇಶ್ವರ್
ಬೆಂಗಳೂರು: ಪಿಎಸ್‌ಐ ನೇಮಕಾತಿ ಮರು ಪರೀಕ್ಷೆಗೆ ಸಂಬಂಧಿಸಿದಂತೆ ಗುಪ್ತದಳದ (ಇಂಟಲಿಜೆನ್ಸ್) ಪರಿಶೀಲನೆ ವೇಳೆ ಮಾಹಿತಿ ಹೊರಬಿದ್ದಿದ್ದು, ಸಿಸಿಬಿ ಪೊಲೀಸರು ಕೂಲಂಕುಶವಾಗಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಅವರು ಹೇಳಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ಸಿಸಿಬಿಯವರು ಓರ್ವನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಯಾವುದೇ ರೀತಿಯ ಅಕ್ರಮ ನಡೆದಿಲ್ಲ. ಅಕ್ರಮದ ಬಗ್ಗೆ ಮಾಹಿತಿ ಸಂಗ್ರಹಿಸಲು ನಕಲಿ ಕರೆ ಮಾಡಿರುವುದಾಗಿ ಆರೋಪಿತ ಹೇಳಿಕೆ ನೀಡಿದ್ದಾನೆ. ಸತ್ಯಾಸತ್ಯತೆಯ ಬಗ್ಗೆ ಕುಲಂಕುಶವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಸುರಕ್ಷಿತವಾಗಿ ಪರೀಕ್ಷೆ ನಡೆಯಲಿದ್ದು, ಅಭ್ಯರ್ಥಿಗಳು ಆತಂಕಪಡುವುದು ಬೇಡ ಎಂದರು.
ಹರಿಪ್ರಸಾದ್ ಅವರ ವಿರುದ್ಧ ಯಾರು ಒಳ ಸಂಚಾಗಲಿ, ಪಿತೂರಿ ನಡೆಸುತ್ತಿಲ್ಲ
ಹರಿಪ್ರಸಾದ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚು ಪ್ರತಿಕ್ರಿಯಿಸಲು ಹೋಗುವುದಿಲ್ಲ. ಅವರ ಹೇಳಿಕೆಗೆ ಸಂಬಂಧಿಸಿದ ಸುದ್ದಿ ರಾಜ್ಯಪಾಲರ ಗಮನಕ್ಕೆ ಬಂದಿತ್ತು. ಈ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದ್ದರು. ಅದರನ್ವಯ ಕಾನೂನು ಚೌಕಟ್ಟಿನಲ್ಲಿ ಏನು ಕೆಲಸ ಮಾಡಬೇಕು ಅದನ್ನು ಪೊಲೀಸರು ಮಾಡಿದ್ದಾರೆ. ಹರಿಪ್ರಸಾದ್ ಅವರ ವಿರುದ್ಧ ಯಾರು ಒಳ ಸಂಚಾಗಲಿ, ಪಿತೂರಿ ನಡೆಸುತ್ತಿಲ್ಲ. ಅವರಿಗೆ ತೊಂದರೆ ಮಾಡಬೇಕು ಎಂಬ ಉದ್ದೇಶ ಯಾರಿಗೂ ಇಲ್ಲ ಎಂದು ತಿಳಿಸಿದರು.
ಪೊಲೀಸರು ತನಿಖೆ ಕೈಗೊಂಡಿದ್ದಾರೆ
ಸಂಸದ ಅನಂತ್ ಕುಮಾರ್ ಹೆಗಡೆ ಅವರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕಲ್ಲಡ್ಕ ಪ್ರಭಾಕರ್ ಭಟ್ ಅವರ ಪ್ರಕರಣದ ತನಿಖೆ ಮುಂದುವರಿದಿದೆ. ನ್ಯಾಯಾಲಯಕ್ಕೆ ದೋಷರೋಪಣಾಪಟ್ಟಿ ಸಲ್ಲಿಸಲಾಗುತ್ತಿದೆ ಎಂದರು.
ಒಳಮೀಸಲಾತಿ ವಿಚಾರದ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಒಳ ಮೀಸಲಾತಿಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರಕ್ಕೆ ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ನಾರಾಯಣಸ್ವಾಮಿ ಅವರು ರಾಜ್ಯಸಭೆಯ ಸದನದಲ್ಲಿ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ 341 (3) ಸಂವಿಧಾನಿಕ ತಿದ್ದುಪಡಿ ತಂದು ಒಳ ಮೀಸಲಾತಿಗೆ ಅವಕಾಶ ಮಾಡಿಕೊಡುವಂತೆ, ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದೇವೆ. ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದರೆ ರಾಜ್ಯದಲ್ಲಿ ಅನುಷ್ಠಾನಗೊಳಿಸುತ್ತೇವೆ ಎಂದರು.