ಇನ್ನು ಮುಂದೆ ವಿಧಾನಸೌಧ, ವಿಕಾಸಸೌಧ ಪ್ರವೇಶಕ್ಕೆ ಸಾರ್ವಜನಿಕರು ಸರದಿ ನಿಲ್ಲಬೇಕಿಲ್ಲ: ಸ್ಪೀಕರ್ ಯು.ಟಿ.ಖಾದರ್
ಬೆಂಗಳೂರು, ಆ.8: ʻವಿಧಾನಸೌಧ, ವಿಕಾಸಸೌಧಕ್ಕೆ ಕೆಲಸದ ನಿಮಿತ್ತ ಭೇಟಿ ನೀಡುವ ಸಾರ್ವಜನಿಕರು ಇನ್ನು ಮುಂದೆ ಸರದಿ ನಿಲ್ಲಬೇಕಿಲ್ಲ. ತಾವು ಯಾರನ್ನು ಭೇಟಿಯಾಗಬೇಕು, ಭೇಟಿಯ ಉದ್ದೇಶ ಏನು ಎಂಬ ವಿವರಗಳನ್ನು ಮನೆಯಲ್ಲೇ ಕುಳಿತು ಹೊಸದಾಗಿ ರೂಪಿಸಲಾಗುತ್ತಿರುವ ಪೋರ್ಟಲ್‍ನಲ್ಲಿ ನಮೂದಿಸಿದರೆ ಸಾಕುʻ ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದ್ಧಾರೆ.
ಮಂಗಳವಾರ ಬೆಂಗಳೂರು ಪ್ರೆಸ್ ಕ್ಲಬ್ ಏರ್ಪಡಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ʻʻಭೇಟಿಯಾಗಬೇಕಾದ ಸಚಿವರು, ಅಧಿಕಾರಿಗಳ ಲಭ್ಯತೆಯ ಆಧಾರದಲ್ಲಿ ದಿನ, ಸಮಯ ನೀಡಲಾಗುತ್ತದೆ. ಈ ಕುರಿತು ಪೊಲೀಸ್, ತಾಂತ್ರಿಕ ಕ್ಷೇತ್ರದ ಪರಿಣತರು, ವಿಧಾನಸೌಧದ ಅಧಿಕಾರಿಗಳ ಜತೆ ಮಾತುಕತೆ ನಡೆಸಲಾಗಿದೆ. ನೂತನ ವ್ಯವಸ್ಥೆ ಜಾರಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆʻʻ ಎಂದು ಮಾಹಿತಿ ನೀಡಿದರು.
ಹಾಗೇ, ವಿಧಾನಸಭೆ ಕ್ಯಾಂಪಸ್‍ಗೆ ಆಧುನಿಕ ತಂತ್ರಜ್ಞಾನ ಅಳವಡಿಸುತ್ತೇವೆ. ಜನರೂ ಸುಲಭವಾಗಿ ಬಂದು ಹೋಗಬೇಕು. ಜನರ ಹಾಗೂ ಅಧಿಕಾರಿಗಳ ಶ್ರಮ ವ್ಯರ್ಥವಾಗಬಾರದು. ಆ ರೀತಿ ವ್ಯವಸ್ಥೆ ಮಾಡಬೇಕಿದೆ. ಆನ್‍ಲೈನ್ ಮೂಲಕ ಅರ್ಜಿ ಹಾಕಿ ಬರಲು ಹಾಗೂ ಪ್ರವೇಶ ದ್ವಾರದಲ್ಲೇ ಲಾಕರ್ ಮಾಡಿ ಬ್ಯಾಗ್‍ಗಳನ್ನು ಇಟ್ಟು ಬರೀ ಪೆನ್ನು, ಪೇಪರ್ ಮಾತ್ರ ಒಳಗೆ ತರಲು ಅವಕಾಶ ಕಲ್ಪಿಸಬೇಕಿದೆ. ಈ ನಿಟ್ಟಿನಲ್ಲಿ ಚರ್ಚೆ ನಡೆದಿದೆ ಎಂದು ಹೇಳಿದರು.
ʻಸಚಿವಾಲಯದಲ್ಲಿ ತಾಂತ್ರಿಕ ಬದಲಾವಣೆʻ
ʻವಿಧಾನಸಭೆ ಅಧಿವೇಶನ ಸಂದರ್ಭದಲ್ಲಿ ಸಲ್ಲಿಕೆಯಾಗುವ ಪೆನ್‍ಡ್ರೈವ್, ಸಿಡಿಗಳ ಸಾಕ್ಷಾಧಾರ ಪರಿಶೀಲನೆಗೆ ಸಚಿವಾಲಯದಲ್ಲಿ ಒಂದಷ್ಟು ತಾಂತ್ರಿಕವಾಗಿ ಬದಲಾವಣೆ ಮಾಡಲಾಗುತ್ತಿದೆ.ಮೊದಲು ವಿಧಾನಸಭಾ ಸ್ಪೀಕರ್‍ಗೆ ಶಾಸಕರಿಂದ ಕಾಗದ ಪತ್ರ ಸಲ್ಲಿಕೆಯಾಗುತಿತ್ತು. ಆದರೆ, ಈಗ ಪೆನ್‍ಡ್ರೈವ್, ಸಿಡಿಗಳು ಸಾಕ್ಷಾಧಾರವಾಗಿ ಸಲ್ಲಿಕೆಯಾಗುತ್ತಿವೆ. ಈ ಸಂಬಂಧ ತಕ್ಷಣವೇ ರೂಲಿಂಗ್ ಕೊಡಲ್ಲ. ಎಲ್ಲವನ್ನೂ ವಿವಿಧ ಆಯಾಮಗಳಿಂದ ಪರಿಶೀಲನೆ ಮಾಡಬೇಕಾಗಿದ್ದು, ಇದಕ್ಕಾಗಿ ಸಚಿವಾಲಯದಲ್ಲಿ ಒಂದಷ್ಟು ತಾಂತ್ರಿಕವಾಗಿ ಬದಲಾವಣೆ ಮಾಡುತ್ತಿದ್ದೇವೆ. ಜೊತೆಗೆ, ಶಾಸಕರ ವಿವಿಧ ಮಾದರಿಯ ದೂರುಗಳನ್ನು ಸಮರ್ಪಕವಾಗಿ ಪರಿಶೀಲನೆ ಮಾಡಲು ನಾವು ಕೂಡ ಬದಲಾಗುತ್ತಿದ್ದೇವೆ ಎಂದು ಅವರು ತಿಳಿಸಿದರು.
ದೇಶದಲ್ಲಿ ಅತಿ ಹೆಚ್ಚು ಶ್ರೀಮಂತ ಶಾಸಕರು ಕರ್ನಾಟಕದಲ್ಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಶಾಸಕರು ಉದ್ಯಮ ನಡೆಸುವುದು ತಪ್ಪಲ್ಲ. ಅದು ಕಾನೂನುಬದ್ಧವಾಗಿ ನಡೆಸಬೇಕು ಎಂದ ಅವರು, ಸ್ಪೀಕರ್ ಸ್ಥಾನ ಅಲಂಕರಿಸಿರುವುದಕ್ಕೆ ನನಗೆ ಹೆಮ್ಮೆಯಿದೆ. ಯಾವುದೇ ರೀತಿಯ ಬೇಸರವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ ಬಲಿಷ್ಠಗೊಳ್ಳಬೇಕಾದರೆ ವಿಧಾನಸಭಾ ಕಲಾಪಗಳು ಪರಿಣಾಮಕಾರಿಯಾಗಬೇಕು. ಆಗ ಉತ್ತಮ ಶಾಸನಗಳು ಜಾರಿಯಾಗಬಹುದು ಎಂದರು.
ರಾಜ್ಯದಲ್ಲಿ ಸರಕಾರ ಅಧಿಕಾರಕ್ಕೆ ಬಂದ ನಂತರ ಶಾಸಕರಿಗೆ ತಕ್ಕಂತೆ ಸೌಲಭ್ಯವನ್ನು ಕಲ್ಪಿಸಲಾಗಿದೆ. ಒಂದು ವೇಳೆ ಶಾಸಕರು ಬಯಸಿದಲ್ಲಿ ಅವರನ್ನು ವಿದೇಶ ಪ್ರವಾಸಕ್ಕೆ ಕಳುಹಿಸಿಕೊಡಲಾಗುವುದು ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಸುಳಿವು ನೀಡಿದರು.
ಗೂಡಂಗಡಿ ಟೀ ಅಂಗಡಿಗೆ ನಷ್ಟ: ಸ್ಪೀಕರ್..!
ನಾನು ಮಂಗಳೂರಿಗೆ ಹೋಗುವಾಗ ಬರುವಾಗ ಮಾರ್ಗ ಮಧ್ಯದ ಒಂದು ಗೂಡಂಗಡಿಯಲ್ಲಿ ಕಾಯಂ ಆಗಿ ಚಹಾ ಕುಡಿಯುತ್ತಿದ್ದೆ. ಸ್ಪೀಕರ್ ಆದ ಮೇಲೆ ಅಲ್ಲಿಗೆ ಹೋಗಲು ಆಗಿರಲಿಲ್ಲ. ಮೊನ್ನೆ ಗೂಡಂಗಡಿಯವನು ಸನ್ನೆ ಮಾಡಿ ಕರೆದಾಗ ಹೋದೆ. ಆದರೆ ನಾನು ಹೋಗುವುದಕ್ಕಿಂತ ಒಂದು ಗಂಟೆ ಮುಂಚಿತವಾಗಿಯೇ ಅಲ್ಲಿ ಭದ್ರತಾ ಸಿಬ್ಬಂದಿ ಹಾಜರಿದ್ದರು. ಇದರಿಂದಾಗಿ ಹೋಟೆಲ್ ಬಳಿ ಪೊಲೀಸರಿರುವ ಕಾರಣಕ್ಕೆ ಯಾವ ಲಾರಿಯೂ ನಿಲ್ಲಿಸದೇ ಹೋಗಿದ್ದವು. ನನ್ನ ಭೇಟಿಯಿಂದ ಗೂಡಂಗಡಿ ಮಾಲಕನಿಗೆ ಅಂದಿನ ವ್ಯಾಪಾರ ನಷ್ಟವಾಗಿತ್ತು ಎಂದು ಯು.ಟಿ.ಖಾದರ್ ನುಡಿದರು..