‘ಬ್ರ್ಯಾಂಡ್ ಬೆಂಗಳೂರು’ ಹೆಸರಿನಲ್ಲಿ ಇನ್ನೆಷ್ಟು ಬಂಡಲ್ ಬಿಡುತ್ತೀರಿ? : ಆರ್.ಅಶೋಕ್

Update: 2024-10-22 13:07 GMT

ಬೆಂಗಳೂರು : ನಗರದಲ್ಲಿ ನಾಲ್ಕೈದು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಜೆಡಿಎಸ್ ನಾಯಕರು ತೀವ್ರ ವ್ಯಕ್ತಪಡಿಸಿದ್ದಾರೆ.

ಇನ್ನೆಷ್ಟು ಬಂಡಲ್ ಬಿಡುತ್ತೀರಿ?: ‘ಪಾರ್ಟ್ ಟೈಮ್ ಬೆಂಗಳೂರು ಅಭಿವೃದ್ಧಿ ಮಂತ್ರಿಗಳಾದ ಡಿ.ಕೆ. ಶಿವಕುಮಾರ್, ಆರು ಸಾವಿರ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ ಎಂದು ತಾವು ಜಾಲತಾಣ, ಮಾಧ್ಯಮಗಳಲ್ಲಿ ಪುಕ್ಕಟೆ ಪ್ರಚಾರ ಪಡೆದುಕೊಂಡು ಸರಿಯಾಗಿ ತಿಂಗಳೂ ಕಳೆದಿಲ್ಲ. ಆದರೆ, ಇವತ್ತು ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳಿದೆಯೋ ಅಥವಾ ಗುಂಡಿಗಳಲ್ಲಿ ರಸ್ತೆ ಇದೆಯೋ ಅರ್ಥವಾಗದ ಸ್ಥಿತಿ ಎದುರಾಗಿದೆ. ಬೆಂಗಳೂರಿನ ಜನತೆ ತಮಗೆ ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರ ನೀಡುವಿರಾ?’ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಎಕ್ಸ್‌ನಲ್ಲಿ ಪ್ರಶ್ನಿಸಿದ್ದಾರೆ.

ಆರು ಸಾವಿರ ರಸ್ತೆಗುಂಡಿಗಳನ್ನು ಮುಚ್ಚಿದ್ದೇವೆ ಅಂತ ಹೇಳಿದ್ದು ನಿಜವಾ ಅಥವಾ ಹಸಿ ಸುಳ್ಳಾ?, 6 ಸಾವಿರ ರಸ್ತೆ ಗುಂಡಿ ಮುಚಿದ್ದೇವೆಂದು ಒಂದೆರಡು ಫೊಟೋ, ವಿಡಿಯೋ ಕಳುಹಿಸಿ ಅಮೆರಿಕದಲ್ಲಿದ್ದ ತಮಗೆ ಅಧಿಕಾರಿಗಳು ಟೋಪಿ ಹಾಕಿದ್ದಾರಾ?, ಅಥವಾ ರಸ್ತೆ ಗುಂಡಿ ಮುಚ್ಚುವ ನೆಪದಲ್ಲಿ ನಕಲಿ ಬಿಲ್ ಸೃಷ್ಟಿ ಮಾಡಿ ಕಮಿಷನ್ ಹೊಡೆದು ಜನರ ಹಣ ಲಪಾಟಾಯಿಸಿದ್ದೀರಾ?, ಅಥವಾ ರಸ್ತೆಗುಂಡಿ ಮುಚ್ಚಿದ್ದ ಕಾಮಗಾರಿ ತಿಂಗಳಲ್ಲಿ ಕಿತ್ತು ಹೋಗುವಷ್ಟು ಕಳಪೆ ಕಾಮಗಾರಿ ಆಗಿತ್ತ?, ಉತ್ತರ ಕೊಡಿ ಉಪಮುಖ್ಯಮಂತ್ರಿಗಳೇ, ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ಇನ್ನೆಷ್ಟು ಬಂಡಲ್ ಬಿಡುತ್ತೀರಿ?’ ಎಂದು ವಾಗ್ದಾಳಿ ನಡೆಸಿದ್ದಾರೆ.

ದೋಣಿ ಸಾರಿಗೆ ಮಾಡುತ್ತೀರಾ?: ‘ಎಲ್ಲಿದ್ದೀಯಪ್ಪಾ ಥಟೀ ಮಿನಿಟ್ಸ್ ಡಿಸಿಎಂ ಡಿ.ಕೆ.ಶಿವಕುಮಾರ್. ಡಿಸಿಎಂ ನೀವ್ ಹೇಳಿದ್ರೀ, ನಾವು ಮಾಡ್ತೀವಿ ಬ್ರಾಂಡ್ ಬೆಂಗಳೂರು!. ಎಷ್ಟೇ ಮಳೆ ಬಂದರೂ ಬರೀ 30 ನಿಮಿಷದಲ್ಲಿ ಎಲ್ಲ ಕ್ಲಿಯರ್ ಮಾಡಿಸ್ತೀವಿ. ಬೆಂಗಳೂರು ಈಗ ಸಂಪೂರ್ಣ ಕೆರೆಯೂರು ಆಗಿದೆ. ನೈಟ್ ರೌಂಡ್ಸ್ ಹಾಕಿದ್ರೆ ಬೆಂಗಳೂರಿನ ಡೆವೆಲಪ್‍ಮೆಂಟ್ ಆಗುತ್ತಾ?’ ಎಂದು ಜೆಡಿಎಸ್ ಕೇಳಿದೆ.

‘ಬೆಂಗಳೂರು ನಗರವನ್ನು ಬ್ರ್ಯಾಂಡ್ ಬೆಂಗಳೂರು ಮಾಡುವೆ ಎಂದಿದ್ದ ಗಿರಾಕಿ ಡಿ.ಕೆ.ಶಿವಕುಮಾರ್, ನಮ್ಮ ಹೆಮ್ಮೆಯ ನಗರವನ್ನು ಇಟಲಿಯ ವೆನಿಸ್ ಮಾಡಿ ಕೃತಾರ್ಥರಾಗಿದ್ದಾರೆ. ಭಾರತದ ಸಿಲಿಕಾನ್ ವ್ಯಾಲಿ, ಉದ್ಯಾನನಗರಿಯಾಗಿದ್ದ ಬೆಂಗಳೂರಿನ ಕೆರೆಗಳನ್ನು ಒಂದಾದ ಮೇಲೆ ಒಂದರಂತೆ ನುಂಗಿದ ಪರಿಣಾಮ ಬೆಂಗಳೂರಿಗೆ ಬೆಂಗಳೂರೇ ಕೆರೆಯಾಗಿಬಿಟ್ಟಿದೆ. ಕೆರೆಗಳ್ಳರ ಕೈಗೆ ಅಧಿಕಾರ ಸಿಕ್ಕಿದರೆ ಇನ್ನೇನಾದೀತು? ಮಳೆ ನೀರನ್ನು ಆಕಾಶಕ್ಕೆ ವಾಪಸ್ ಕಳಿಸುತ್ತೀರಾ? ಅಥವಾ ಬೆಂಗಳೂರು ರಸ್ತೆಗಳ ಮೇಲೆ ದೋಣಿ ಸಾರಿಗೆ ಮಾಡುತ್ತೀರಾ?’ ಎಂದು ಜೆಡಿಎಸ್ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿ ಟೀಕಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News