ನೀತಿ ಸಂಹಿತೆ ಉಲ್ಲಂಘನೆ ಆರೋಪ: ಸರಕಾರದ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಚುನಾವಣಾ ಆಯೋಗಕ್ಕೆ ಆರ್. ಅಶೋಕ್ ಮನವಿ
ಬೆಂಗಳೂರು: ಮೂರು ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದ್ದು, ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಿರುವಾಗ ನೀತಿ ಸಂಹಿತೆ ಗಾಳಿಗೆ ತೂರಿ, ಸರಕಾರಿ ಖರ್ಚಿನಲ್ಲಿ ಪ್ರಕಟವಾಗಿರುವ ಜಾಹೀತರಾತನ್ನು ನೀತಿ ಸಂಹಿತೆಯ ಉಲ್ಲಂಘನೆ ಎಂದು ಪರಿಗಣಿಸಿ ಸರಕಾರದ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.
ಗುರುವಾರ ಎಕ್ಸ್ ನಲ್ಲಿ ಸರಣಿ ಪೋಸ್ಟ್ ಹಾಕಿರುವ ಅವರು, ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಘೋಷಣೆಯಾದ ಮರುಕ್ಷಣದಿಂದಲೇ ಚುನಾವಣಾ ಮಾದರಿ ನೀತಿ ಸಂಹಿತೆಯೂ ಜಾರಿಗೆ ಬಂದಿದೆ. ಈ ಕುರಿತು ಚುನಾವಣಾ ಆಯೋಗ ಸರಕಾರದ ಮುಖ್ಯ ಕಾರ್ಯದರ್ಶಿಗೆ ಹಾಗೂ ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಪತ್ರವನ್ನೂ ತಲುಪಿಸಿದೆ.
‘ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ಸರಕಾರದ ಖರ್ಚಿನಲ್ಲಿ ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟಿಸುವುದಾಗಲಿ, ಸರಕಾರದ ಸಾಧನೆಗಳ ಬಗ್ಗೆ ಪ್ರಚಾರ ಮಾಡುವುದಾಗಲಿ, ಜಾಹೀರಾತುಗಳಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರುಗಳ ಫೋಟೋ ಬಳಸುವುದಾಗಲಿ ನೀತಿ ಸಂಹಿತೆಯ ಉಲ್ಲಂಘನೆ ಆಗುತ್ತದೆ ಎಂಬ ವಿಷಯ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ತಿಳಿದಿಲ್ಲವೇ?’ ಎಂದು ಅವರು ಪ್ರಶ್ನಿಸಿದ್ದಾರೆ.
‘ವಾಲ್ಮೀಕಿ ಜಯಂತಿಯ ಪ್ರಯುಕ್ತ ಇಂದಿನ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಸರಕಾರಿ ಜಾಹೀರಾತಿನಲ್ಲಿ ಸರಕಾರದ ಸಾಧನೆಗಳು ಅಂತ ಹೇಳಿಕೊಂಡಿರುವ ಜೊತೆಗೆ ಮುಖ್ಯಮಂತ್ರಿ ಹಾಗು ಉಪಮುಖ್ಯಮಂತ್ರಿ ಫೋಟೋ ಬಳಸಲಾಗಿದೆ. ಒಂದು ವೇಳೆ ವಾಲ್ಮೀಕಿ ಜಯಂತಿಗೆ ಶುಭಾಶಯ ಕೋರುವ ಉದ್ದೇಶ ಮಾತ್ರ ಇದ್ದಿದ್ದರೆ, ಸರಕಾರದ ಸಾಧನೆಗಳು ಹಾಗು ಸಿಎಂ ಮತ್ತು ಡಿಸಿಎಂ ಭಾವಚಿತ್ರ ಇಲ್ಲದೆ ಕೇವಲ ಶುಭಾಶಯ ಕೋರುವ ಜಾಹಿರಾತು ಪ್ರಕಟಿಸಬಹುದಿತ್ತು. ಆದರೆ ಸರಕಾರ ಉದ್ದೇಶಪೂರ್ವಕವಾಗಿಯೇ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವುದು ಸ್ಪಷ್ಟ ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ.