ಮೋದಿ ಉಪನಾಮೆ ಪ್ರಕರಣ: ಸುಪ್ರೀಂಕೋರ್ಟ್ ತೀರ್ಪಿಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ ಏನು?
ಹೊಸದಿಲ್ಲಿ: ಮೋದಿ ಉಪನಾಮೆ ಪ್ರಕರಣದಲ್ಲಿ ಗುಜರಾತ್ ನ್ಯಾಯಾಲಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ನೀಡಿದ ಶಿಕ್ಷೆಗೆ ತಡೆಯಾಜ್ಞೆ ವಿಧಿಸಿ ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಟ್ವೀಟ್ ಮಾಡಿದ ರಾಹುಲ್, “ಏನೇ ಆಗಲಿ, ನನ್ನ ಕರ್ತವ್ಯ ಅದೇ ಆಗಿದೆ. ಭಾರತದ ಪರಿಕಲ್ಪನೆಯನ್ನು ರಕ್ಷಿಸುವುದು,” ಎಂದು ಹೇಳಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆಗೆ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ ರಾಹುಲ್ ಗಾಂಧಿ, “ನನ್ನ ಹಾದಿ ಸ್ಪಷ್ಟವಾಗಿದೆ. ನಾನೇನು ಮಾಡಬೇಕೆಂಬುದರ ಸ್ಪಷ್ಟತೆ ನನಗೆ ಇದೆ. ನನಗೆ ದೊರೆತ ಎಲ್ಲಾ ಬೆಂಬಲಕ್ಕೆ ಧನ್ಯವಾದ,” ಎಂದರು.
ಖರ್ಗೆ ಮಾತನಾಡಿ, ಪ್ರಜಾಪ್ರಭುತ್ವ ಗೆದ್ದಿದೆ ಎಂದರು. “ಅವರು ಸತ್ಯಕ್ಕಾಗಿ ಹೋರಾಡಿದರು… ಮತ್ತು ಕಾಶ್ಮೀರದಿಂದ ಕನ್ಯಾಕುಮಾರಿ ತನಕ 4,000ಕ್ಕೂ ಅಧಿಕ ದೂರ ಕ್ರಮಿಸಿ ಎಲ್ಲಾ ವರ್ಗಗಳ ಜನರೊಂದಿಗೆ ಮಾತನಾಡಿದ್ದಾರೆ. ಆ ಜನರ ಆಶೀರ್ವಾದದಿಂದಲೇ ಇಂದು ನಮಗೆ ಈ ಫಲಿತಾಂಶ ದೊರಕಿದೆ,” ಎಂದು ಹೇಳಿದರು.
ಈ ಸಂದರ್ಭ ಆಡಳಿತ ಬಿಜೆಪಿಯತ್ತ ವಾಗ್ಬಾಣ ಹರಿಸಿದ ಖರ್ಗೆ, “ಅವರನ್ನು ಅನರ್ಹಗೊಳಿಸಲು ಅವರಿಗೆ 24 ಗಂಟೆಗಳೂ ತಗಲಿಲ್ಲ, ಅವರ ಸಂಸದ ಸ್ಥಾನ ಮರುಸ್ಥಾಪಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ನೋಡೋಣ,”ಎಂದರು.