ರಾಜ್ಯಸಭಾ ಚುನಾವಣೆ | ನಮ್ಮ ಶಾಸಕರಿಗೆ ಕುಮಾರಸ್ವಾಮಿ ಆಮಿಷವೊಡ್ಡಿರುವ ಬಗ್ಗೆ ಮಾಹಿತಿ ಬಂದಿದೆ: ಡಿಕೆಶಿ ಆರೋಪ

Update: 2024-02-19 09:57 GMT

ಬೆಂಗಳೂರು: “ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ನಮ್ಮ ಶಾಸಕರಿಗೆ ಕರೆ ಮಾಡಿ ಆಮಿಷ ನೀಡುತ್ತಿರುವುದು, ಧಮಕಿ ಹಾಕುತ್ತಿರುವ ಬಗ್ಗೆ ನನಗೆ ಮಾಹಿತಿ ಬಂದಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “ಕುಮಾರಸ್ವಾಮಿ ಯಾರಿಗೆ ಫೋನ್ ಮಾಡಿ, ಏನು ಮಾತನಾಡುತ್ತಿದ್ದಾರೆ. ಯಾರಿಗೆ ಧಮಕಿ ಹಾಕುತ್ತಿದ್ದಾರೆ, ಎಲ್ಲವೂ ನಮಗೆ ತಿಳಿಯುತ್ತಿದೆ. ಕುಮಾರಸ್ವಾಮಿ ಯಾರಿಗೆ, ಯಾವೆಲ್ಲಾ ಆಫರ್ ಕೊಟ್ಟಿದ್ದಾರೆ ಎಂದು ಶಾಸಕರು ನಮಗೆ ಮಾಹಿತಿ ನೀಡಿದ್ದಾರೆ. ಬಿಜೆಪಿ ತಂತ್ರಗಾರಿಕೆ ಬಗ್ಗೆಯೂ ಗೊತ್ತಿದೆ. ಮೊದಲು ಅವರು ತಮ್ಮ ಮನೆ ಸರಿಪಡಿಸಿಕೊಳ್ಳಲಿ. ಈಗ ಇದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ.” ಎಂದು ಹೇಳಿದರು.

 ಸೋಮಶೇಖರ್, ಗೋಪಾಲಯ್ಯ ಜತೆ ವೈಯಕ್ತಿಕ ಬಾಂಧವ್ಯವಿದೆ:

ಬಿಜೆಪಿ ಶಾಸಕ ಸೋಮಶೇಖರ್ ಅವರ ಜತೆ ವಿಮಾನ ಪ್ರಯಾಣ ಹಾಗೂ ಗೋಪಾಲಯ್ಯ ಅವರ ಭೇಟಿ ವಿಚಾರವಾಗಿ ಕೇಳಿದಾಗ, ʼಸೋಮಶೇಖರ್ ಹಾಗೂ ಗೋಪಾಲಯ್ಯ ಅವರ ಜತೆ ವೈಯಕ್ತಿಕ ಸ್ನೇಹ, ಸಂಬಂಧಗಳಿವೆ. ಅವರು ಕೇವಲ ಮೂರು ವರ್ಷ ಮಾತ್ರ ಬೇರೆ ಕಡೆ ಹೋಗಿದ್ದಾರೆ. ಆದರೆ 35 ವರ್ಷಗಳಿಂದ ನಾವು ರಾಜಕೀಯವಾಗಿ ಸಂಸಾರ ಮಾಡಿದ್ದೇವೆʼ ಎಂದು ತಿಳಿಸಿದರು.

ಕಮಲನಾಥ್ ಸೇರಿದಂತೆ ಯಾರೂ ಬಿಜೆಪಿ ಸೇರಲ್ಲ:

ಬಿಜೆಪಿ ಬರೀ ಸುಳ್ಳನ್ನು ಪ್ರಚಾರ ಮಾಡಿಕೊಂಡೆ ಇರುತ್ತದೆ. ಕಮಲನಾಥ್ ಅವರು ಬಹಳ ಹಿರಿಯ ನಾಯಕರು. ಅವರು ಈಗಷ್ಟೇ ಚುನಾವಣೆ ಮುಗಿಸಿದ್ದಾರೆ. ಅವರು ಎಲ್ಲೂ ಬಿಜೆಪಿ ಸೇರುವುದಾಗಿ ಹೇಳಿಲ್ಲ. ಆದರೂ ಅವರು ಬಿಜೆಪಿ ಸೇರುತ್ತಾರೆ ಎಂದು ಸುಳ್ಳು ಹರಡುತ್ತಾರೆ. ಕಮಲನಾಥ್ ಅವರು 50 ವರ್ಷಗಳ ರಾಜಕಾರಣದಲ್ಲಿ ಗಾಂಧಿ ಕುಟುಂಬದ ಜತೆ ಒಡನಾಟ ಇಟ್ಟುಕೊಂಡು ಪಕ್ಷ ಕಟ್ಟಿದ್ದಾರೆ. ಇಂತಹವರು ಬಿಜೆಪಿ ಸೇರುತ್ತಾರೆ ಎಂದು ಸುಳ್ಳು ಹೇಳಿ ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ.

ಹೈಕಮಾಂಡ್ ತೀರ್ಮಾನ ಎಲ್ಲರೂ ಪಾಲಿಸಬೇಕು:

ಸಚಿವರು ಲೋಕಸಭೆ ಚುನಾವಣೆಲ್ಲಿ ಸಚಿವರ ಸ್ಪರ್ಧೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು,“ಲೋಕಸಭೆ ಚುನಾವಣೆಯಲ್ಲಿ ಯಾರು ಸ್ಪರ್ಧಿಸಬೇಕು ಎಂಬುದನ್ನು ಪಕ್ಷ ತೀರ್ಮಾನಿಸುತ್ತದೆ. ಪಕ್ಷದ ತೀರ್ಮಾನವನ್ನು ನಾನು ಸೇರಿದಂತೆ ಎಲ್ಲರೂ ಪಾಲಿಸಬೇಕು. ನಾವೆಲ್ಲ ಒಟ್ಟಾಗಿ ಕೆಲಸ ಮಾಡಿ ಹೆಚ್ಚಿನ ಕ್ಷೇತ್ರದಲ್ಲಿ ಪಕ್ಷ ಗೆಲ್ಲುವಂತೆ ಮಾಡಬೇಕು” ಎಂದು ತಿಳಿಸಿದರು.

ಕುವೆಂಪು ಅವರ ತತ್ವ ಸಿದ್ಧಾಂತದ ಪಾಲನೆ, ಪ್ರಚಾರ ಮಾಡುತ್ತಿರುವವರು ನಾವು:

ಶಾಲೆಗಳಲ್ಲಿ ಘೋಷವಾಕ್ಯ ಬದಲಾವಣೆ ವಿಚಾರವಾಗಿ ಬಿಜೆಪಿ ಟೀಕೆ ಬಗ್ಗೆ ಕೇಳಿದಾಗ, “ನನಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ನಾವು ಕುವೆಂಪು ಅವರ ಆಚಾರ, ವಿಚಾರ ಪ್ರಚಾರ ಮಾಡುತ್ತಿದ್ದೇವೆ. ಕುವೆಂಪು ಅವರ "ಭಾರತ ಜನನಿಯ ತನುಜಾತೆ...", "ಸರ್ವಜನಾಂಗದ ಶಾಂತಿಯ ತೋಟ..." ಸಂದೇಶವನ್ನು ಪ್ರತಿನಿತ್ಯ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ರಾಜ್ಯದ ಜನರಿಗೆ ಹೇಳುತ್ತಾ ಬಂದಿದ್ದೇವೆ. ಕುವೆಂಪು ಅವರ ತತ್ವ ಸಿದ್ಧಾಂತಗಳನ್ನು ನಾವು ಪಾಲಿಸಿ ಅದಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದ್ದೇವೆ. ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ. ಹೀಗಾಗಿ ಎಲ್ಲದರಲ್ಲೂ ತಪ್ಪು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಜನರ ಬದುಕಿನ ಬಗ್ಗೆ ಯೋಚಿಸುವುದಿಲ್ಲ, ಭಾವನೆ ಬಗ್ಗೆ ಮಾತ್ರ ಆಲೋಚಿಸಿ ಸಮಾಜ ಕೆಡಿಸುವ ಕೆಲಸ ಮಾಡುತ್ತಾರೆ” ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News