ಅಧಿವೇಶನದ ಬಳಿಕ ಸಾರಿಗೆ ನೌಕರರ ಉಪಧನ ಬಿಡುಗಡೆ : ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು: ಪರಿಷ್ಕೃತ ವೇತನ ಶ್ರೇಣಿಯಲ್ಲಿ ಸೇವಾ ವಿಮುಕ್ತಿ ಹೊಂದಿದ ಸಾರಿಗೆ ನಿಗಮಗಳ ನೌಕರರ ಉಪಧನ ಮತ್ತು ಗಳಿಕೆ ರಜೆ ನಗದೀಕರಣ ವ್ಯತ್ಯಾಸದ ಮೊತ್ತ ಪಾವತಿಸಲು 224 ಕೋಟಿ ರೂ.ಗಳನ್ನು ನೀಡಲು ಸರಕಾರವು ಡಿ.7ರಂದು ಸರಕಾರಿ ಆದೇಶ ಹೊರಡಿಸಿದ್ದು, ಅಧಿವೇಶನದ ನಂತರ ಹಣ ಬಿಡುಗಡೆಯಾಗಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಬ್ಬಂದಿಗಳ ಅಂತರ ನಿಗಮ ವರ್ಗಾವಣೆಯ ಪಟ್ಟಿ ಬಿಡುಗಡೆ ಮಾಡಲಾಗಿದೆ. ಭವಿಷ್ಯನಿಧಿ ಮತ್ತು ಡೀಸೆಲ್ ಬಾಕಿ ಹಣ ಪಾವತಿಗಾಗಿ ಸರಕಾರವೇ ಗ್ಯಾರೆಂಟಿ ನೀಡಿ 2000 ಕೋಟಿ ರೂ. ಲೋನ್ ನೀಡಿದೆ ಎಂದರು.
ಆರೋಗ್ಯದ ಕಾರಣದಿಂದಾಗಿ ವೈಯಕ್ತಿಕವಾಗಿ ಸಭೆ ನಡೆಸಲು ಸಾಧ್ಯವಾಗಲಿಲ್ಲ. ಹೀಗಾಗಿ ಈ ಎಲ್ಲ ವಿಷಯಗಳನ್ನು ಕಾರ್ಮಿಕ ಸಂಘಟನೆಗಳಿಗೆ ತಿಳಿಸಲು ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಸಾರಿಗೆ ಸಂಸ್ಥೆ ಮತ್ತು ಬಸ್ಸುಗಳು ಜನರ ಜೀವನಾಡಿಯಾಗಿದ್ದು, ಇತ್ತೀಚಿನ ದಿನಗಳಲ್ಲಿ 5800 ಹೊಸ ಬಸ್ಸುಗಳ ಸೇರ್ಪಡೆ, 10000 ಹೊಸ ನೇಮಕಾತಿಗಳು ಸೇರಿ ಹತ್ತು ಹಲವು ಕಾರ್ಮಿಕ ಕಲ್ಯಾಣ ಉಪಕ್ರಮಗಳು ಸಂಸ್ಥೆಗಳಲ್ಲಿ ಯಶಸ್ವಿಯಾಗಿ ಜಾರಿಗೆ ತರಲಾಗುತ್ತಿದೆ. ಸಾರಿಗೆ ಸಿಬ್ಬಂದಿಗಳ ಬಗ್ಗೆ ಅಪಾರವಾದ ಕಾಳಜಿಯಿದ್ದು, ಅವರ ಹಲವು ವರ್ಷಗಳ ಬೇಡಿಕೆಯಾದ ನಗದು ರಹಿತ ಆರೋಗ್ಯ ಸೇವೆಗೂ ಶೀಘ್ರದಲ್ಲಿಯೇ ಚಾಲನೆ ನೀಡಲಾಗುತ್ತಿದೆ ಎಂದು ಸಚಿವರು ಹೇಳಿದರು.
ಹಿಂದಿನ ಸರಕಾರದ ಅವಧಿಯಲ್ಲಿ ಭವಿಷ್ಯನಿಧಿ, ಡೀಸೆಲ್ ಬಾಕಿ, ಉಪಧನ, ನಿವೃತ್ತ ನೌಕರರ ಬಾಕಿ ಎಲ್ಲ ಸೇರಿ 5900 ಕೋಟಿ ರೂ. ಸಾಲ ಬಾಕಿ ಉಳಿದಿರುವ ಕಾರಣ ಸಾರಿಗೆ ಸಂಸ್ಥೆಗಳನ್ನು ಸಹಜ ಸ್ಥಿತಿಗೆ ತರಲು ಕಾಲಾವಕಾಶದ ಅಗತ್ಯವಿದೆ. ಇವೆಲ್ಲವುಗಳ ಬಗ್ಗೆ ಕಾರ್ಮಿಕ ಮುಖಂಡರುಗಳಿಗೆ, ಸಂಘಟನೆಗಳಿಗೆ ಸಂಪೂರ್ಣ ಮಾಹಿತಿಯಿದೆ. ಸಾರಿಗೆ ಸಂಸ್ಥೆಗಳು ಯಾವ ಸ್ಥಿತಿಯಲ್ಲಿವೆ, ಹಿಂದಿನಿಂದಲೂ ಎಷ್ಟು ನಷ್ಟದಲ್ಲಿವೆ, ಬಾಕಿ ಹಣ ಎಷ್ಟು ಕೊಡಬೇಕಾಗಿದೆ ಎಂಬುದು ತಿಳಿದಿದೆ.
ಇಂತಹ ಸಂದರ್ಭದಲ್ಲಿ ಬೆಳಗಾವಿ ಚಲೋ ನಡೆಸಿ ಮುಷ್ಕರ ನಡೆಸುವುದು ಸೂಕ್ತವಲ್ಲ. ಕಾರ್ಮಿಕ ಸಂಘಟನೆಗಳ ಇತರೆ ಬೇಡಿಕೆಗಳ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದ್ದು, ಆರೋಗ್ಯ ಸುಧಾರಣೆ ನಂತರ ಮಾತುಕತೆ ಪುನಾರಂಭಿಸಲಾಗುವುದು ಎಂದು ಸಚಿವರು ಹೇಳಿದರು.