ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ : ಶಂಕಿತನಿಗೆ ಇನ್‍ಸ್ಪೆಕ್ಟರ್ ಸಹಾಯದ ಆರೋಪ, ತನಿಖೆ
Update: 2024-04-01 15:30 GMT
ಬೆಂಗಳೂರು: ನಗರದ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಸಂಬಂಧ ಬಂಧಿತ ಆರೋಪಿ ಮುಝಮ್ಮಲ್ ಶರೀಫ್‍ನ ತಾಯಿಗೆ ಚಿಕ್ಕಮಗಳೂರಿನಲ್ಲಿ ಬಾಡಿಗೆಮನೆ ಮಾಡಲು ಸರ್ಕಲ್ ಇನ್‍ಸ್ಪೆಕ್ಟರ್‍ವೊಬ್ಬರು ಸಹಾಯ ಮಾಡಿದ್ದಾರೆಂಬ ಆರೋಪದ ಹಿನ್ನಲೆಯಲ್ಲಿ ಎನ್‍ಐಎ ಅಧಿಕಾರಿಗಳು ತನಿಖೆ ಕೈಗೊಂಡಿರುವುದಾಗಿ ವರದಿಯಾಗಿದೆ.
ಇತ್ತೀಚೆಗೆ ಎನ್‍ಐಎ ಬಂಧಿಸಿದ್ದ ಆರೋಪಿ ಮುಝಮ್ಮಲ್ ಶರೀಫ್‍ನನ್ನು ವಿಚಾರಣೆಗೊಳಪಡಿಸಿದಾಗ ಬಾಡಿಗೆಗೆ ಮನೆ ಮಾಡಲು ಸಿಪಿಐ ಸಹಾಯ ಮಾಡಿರುವ ಅಂಶ ಗೊತ್ತಾಗಿದೆ.
ಕಳಸಾ ಮೂಲದ ಆರೋಪಿ ಮುಝಮ್ಮಲ್ ಶರೀಫ್ ತನ್ನ ತಾಯಿಯನ್ನು ಚಿಕ್ಕಮಗಳೂರಿಗೆ ಕರೆಸಿಕೊಂಡು ಬಾಡಿಗೆ ಮನೆ ಮಾಡಿ ಇರಿಸಿದ್ದ. ಬಾಡಿಗೆ ಮನೆ ಮಾಡಲು ಸರ್ಕಲ್ ಇನ್‍ಸ್ಪೆಕ್ಟರ್ ನೆರವು ನೀಡಿರುವ ಮಾಹಿತಿ ಲಭ್ಯವಾಗಿದೆ. ಹಾಗಾಗಿ ಸಿಪಿಐ ಅವರು ಆರೋಪಿ ಮುಝಮ್ಮಲ್ ಶರೀಫ್ ಜೊತೆ ಯಾವ ರೀತಿ ಸಂಪರ್ಕ ಇಟ್ಟುಕೊಂಡಿದ್ದರು ಎಂಬುದರ ಕುರಿತು ಎನ್‍ಐಎ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.