ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ : ಓರ್ವನನ್ನು ವಶಕ್ಕೆ ಪಡೆದ ಎನ್ಐಎ
ಬೆಂಗಳೂರು: ನಗರದ ರಾಮೇಶ್ವರಂ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿಯಲ್ಲಿ ದಾಳಿ ನಡೆಸಿದ ಎನ್ಐಎ ಅಧಿಕಾರಿಗಳು ಆರೋಪಿಯೊಬ್ಬನನ್ನು ವಶಕ್ಕೆ ಪಡೆದಿದ್ದಾರೆ.
ಇಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಯುವಕನ ಮನೆ ಮೇಲೆ ದಾಳಿ ನಡೆಸಿದ ಎನ್ಐಎ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದರು. ಹೆಚ್ಚಿನ ವಿಚಾರಣೆಗೆ ಎನ್ಐಎ ಅಧಿಕಾರಿಗಳು ಯುವಕನನ್ನು ಬೆಂಗಳೂರಿಗೆ ಕರೆದೊಯ್ದಿದ್ದಾರೆ. ರಾಮೇಶ್ವರಂ ಬಾಂಬ್ ಪ್ರಕರಣಕ್ಕೂ ಮತ್ತು ಈ ಶಂಕಿತ ಯುವಕನಿಗೂ ಏನಾದರೂ ಲಿಂಕ್ ಇದೆಯೇ ಎಂಬುದು ವಿಚಾರಣೆಯಿಂದ ತಿಳಿದುಬರಬೇಕಿದೆ.
ಏನಿದು ಪ್ರಕರಣ: ಬೆಂಗಳೂರಿನ ವೈಟ್‌ಫೀಲ್ಡ್ ಪ್ರದೇಶದಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ 1ರಂದು ಭಾರೀ ಸ್ಫೋಟ ಸಂಭವಿಸಿತ್ತು. 9 ಮಂದಿ ಗ್ರಾಹಕರು ಗಾಯಗೊಂಡಿದ್ದರು. ಸುಧಾರಿತ ಕಡಿಮೆ ತೀವ್ರತೆಯ ಬಾಂಬ್ ಇದಾಗಿದ್ದರಿಂದ ದೊಡ್ಡ ಹಾನಿ ಸಂಭವಿಸಿರಲಿಲ್ಲ.
ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ಸಿಸಿಬಿ ಪೊಲೀಸರು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಆರೋಪಿ ಬ್ಯಾಗ್ ಸಮೇತ ಕೆಫೆಗೆ ಆಗಮಿಸಿ, ಬಳಿಕ ಒಬ್ಬನೇ ತೆರಳುತ್ತಿರುವುದು ಪತ್ತೆಯಾಗಿದೆ. ಈತನ ಚಹರೆಯನ್ನು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.