ʼಭಾರತ್ ಜೋಡೊʼ ನೆನಪಿನ ಪಾದಯಾತ್ರೆ: ರಾಮನಗರದಲ್ಲಿ ಕಾರ್ಯಕರ್ತರೊಂದಿಗೆ ಹೆಜ್ಜೆ ಹಾಕಿದ ಸಿಎಂ, ಡಿಸಿಎಂ​

Update: 2023-09-07 16:35 GMT

ರಾಮನಗರ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಸಿದ್ದ ಭಾರತ್ ಜೋಡೊ ಯಾತ್ರೆ ಒಂದನೇ ವಾರ್ಷಿಕೋತ್ಸವದ ಅಂಗವಾಗಿ ಗುರುವಾರ ರಾಮನಗರದಲ್ಲಿ ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಸಹಿತ ಹಲವು ನಾಯಕರು ಪಾಲ್ಗೊಂಡರು. 

ಸುಮಾರು 5 ಕಿ.ಮೀ ಸಾಗಿದ ಪಾದಯಾತ್ರೆಯಲ್ಲಿ ಸಿಎಂ, ಡಿಸಿಎಂ ಜೊತೆ ಸಂಸದ ಡಿ.ಕೆ.ಸುರೇಶ್, ಸಚಿವ ಮಂಕಾಳ ವೈದ್ಯ ಸೇರಿ ಜಿಲ್ಲೆಯ ಕಾಂಗ್ರೆಸ್ ಶಾಸಕರು ಮತ್ತು ಸಾವಿರಾರು ಕಾರ್ಯಕರ್ತರು ಹೆಜ್ಜೆ ಹಾಕಿದರು. ಬಳಿಕ ಬೃಹತ್ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದರು.

ಈ ಕುರಿತಾಗಿ ಟ್ವೀಟ್‌ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ʼʼಮೂರು ದಶಕಗಳ ಹಿಂದೆ ಈ ದೇಶದಲ್ಲಿ ರಥಯಾತ್ರೆಯೊಂದು ಹೊರಟಿತ್ತು. ದ್ವೇಷ, ಸುಳ್ಳು, ಅಪನಂಬಿಕೆಗಳನ್ನು ಬಿತ್ತುತ್ತಾ ಸಾಗಿದ ಆ ಯಾತ್ರೆ ಬಹುತ್ವ ಭಾರತದ ಎದೆಯೊಳಗೆ ಮಾಡಿದ ಗಾಯ ಇನ್ನೂ ಮಾಸಿಲ್ಲ. ಆ ಗಾಯಕ್ಕೆ ಪ್ರೀತಿ, ಶಾಂತಿ, ಸಹಬಾಳ್ವೆಯ ಮುಲಾಮು ಹಚ್ಚಿ ಗುಣಪಡಿಸುವ ಸದುದ್ದೇಶದಿಂದ ರಾಹುಲ್ ಗಾಂಧಿಯವರು ಪಾದಯಾತ್ರೆ ಶುರುಮಾಡಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಭುತ್ವ ಪ್ರಜೆಗಳ ದನಿಗೆ ಕಿವಿಗೊಡಬೇಕು. ಅವರ ಕಷ್ಟ-ಸುಖ, ಸಮಸ್ಯೆ-ಸಂಕಷ್ಟಗಳನ್ನು ಅರಿಯುವ ಕೆಲಸವನ್ನು ಮಾಡಬೇಕು. ಜನ ಪರಸ್ಪರ ಪ್ರೀತಿ-ವಿಶ್ವಾಸದಿಂದ ಒಟ್ಟಾಗಿ ಬದುಕುವ ವಾತಾವರಣವನ್ನು ಕಲ್ಪಿಸಬೇಕು. ಆದರೆ ಭಾರತೀಯ ಜನತಾ ಪಕ್ಷ ಆಡಳಿತದ ವೈಫಲ್ಯವನ್ನು ಮುಚ್ಚಿಹಾಕಲು ಜನರ ನಡುವೆ ಪರಸ್ಪರ ದ್ವೇಷಾಸೂಯೆಗಳನ್ನು ಬಿತ್ತಿ ಸಮಾಜವನ್ನು ಜಾತಿ-ಧರ್ಮದ ಆಧಾರದಲ್ಲಿ ಒಡೆಯುವ ಕೆಲಸವನ್ನು ಮಾಡುತ್ತಿದೆ. ಅನ್ಯಾಯದ ವಿರುದ್ದ ದನಿ ಎತ್ತುವವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನ ಮಾಡಲಾಗುತ್ತಿದೆ. ಇದರ ವಿರುದ್ದ ಸಂಘಟಿತವಾದ ಹೋರಾಟ ನಡೆಯಬೇಕಾಗಿದೆʼʼ ಎಂದು  ಕರೆ ನೀಡಿದ್ದಾರೆ. 

 

 

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News