ರಾಮನಗರ | ದೇವಸ್ಥಾನದ ನಲ್ಲಿಯಲ್ಲಿ ನೀರು ತುಂಬಲು ಹೋದ ದಲಿತ ಬಾಲಕಿಗೆ ನಿಂದಿಸಿದ ಪೂಜಾರಿ: ಪ್ರಕರಣ ದಾಖಲು
ರಾಮನಗರ: ಜಿಲ್ಲೆಯ ಚನ್ನಮಾನಹಳ್ಳಿಯಲ್ಲಿ ಜಾತಿ ದೌರ್ಜನ್ಯದ ಘಟನೆಯೊಂದು ವರದಿಯಾಗಿದೆ.
ದೇವಸ್ಥಾನದ ನಲ್ಲಿಯಲ್ಲಿ ನೀರು ಹಿಡಿಯಲು ಹೋದ ಪರಿಶಿಷ್ಟ ಜಾತಿಗೆ ಸೇರಿದ 13 ವರ್ಷದ ಬಾಲಕಿಯನ್ನು ದೇವಸ್ಥಾನದ ಪೂಜಾರಿ ಹಾಗೂ ಆತನ ಸಹೋದರಿ ಜಾತಿ ಹೆಸರಲ್ಲಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಕುರಿತು ಐಜೂರು ಪೊಲೀಸ್ ಠಾಣೆಗೆ ಬಾಲಕಿಯ ಚಿಕ್ಕಪ್ಪ ಪ್ರಸನ್ನಕುಮಾರ್ ದೂರು ನೀಡಿದ್ದು, ಆರೋಪಿಗಳ ವಿರುದ್ಧ ಎಸ್ಸಿ ಮತ್ತು ಎಸ್ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಪ್ರಕರಣ ವಿವರ: ಸೋಮವಾರ ಬಾಲಕಿಯು ತನ್ನ ಮನೆಯ ಸಮೀಪವೇ ಇದ್ದ ಮಾರಮ್ಮ ದೇವಸ್ಥಾನದ ಬಳಿಯ ನಲ್ಲಿಯಲ್ಲಿ ನೀರು ತುಂಬಿಸಲು ಬಿಂದಿಗೆ ತೆಗೆದುಕೊಂಡು ಹೋಗಿದ್ದಾಳೆ. ಈ ವೇಳೆ, ಪೂಜಾರಿ ಕುಮಾರ್ ಮತ್ತು ಆತನ ಸಹೋದರಿ ಯಶೋಧಾ ಬಾಲಕಿಗೆ ನಿಂದಿಸಿದ್ದಾರೆನ್ನಲಾಗಿದ್ದು, ಇದನ್ನು ಪ್ರಶ್ನಿಸಿದ ಬಾಲಕಿಯ ಚಿಕ್ಕಪ್ಪ ಹಾಗೂ ಸ್ನೇಹಿತನ ಮೇಲೆ ಹಲ್ಲೆ ನಡೆದಿದೆ ಎಂದೂ ದೂರಲಾಗಿದೆ .
‘ಕುಮಾರ್ ಮತ್ತು ಯಶೋಧಾ ತಮ್ಮ ಕೆನ್ನೆಗೆ ಹೊಡೆದು, ಕಲ್ಲಿನಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದರು’ ಎಂದು ಬಾಲಕಿಯ ಚಿಕ್ಕಪ್ಪ ಪ್ರಸನ್ನಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಎಸ್ಸಿ ಮತ್ತು ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ, ಐಪಿಸಿ 323, 324, 504, 506 ಹಾಗೂ 34 ಕಲಂ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಯಶೋಧಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ತಲೆ ಮೆರೆಸಿಕೊಂಡಿರುವ ಕುಮಾರ್ ಪತ್ತೆಗೆ ಬಲೆ ಬೀಸಿದ್ದಾರೆ.