‘ಅರ್ಥಹೀನ ಪ್ರಶ್ನೆಗಳನ್ನು ಕೇಳಿ ನಿಮ್ಮ ಸ್ಥಾನದ ಗೌರವ ಕಳೆಯಬೇಡಿ’ : ವಿಪಕ್ಷ ನಾಯಕ ಆರ್.ಅಶೋಕ್‍ಗೆ ಸಿಎಂ ಸಲಹೆ
ಬೆಂಗಳೂರು : ‘ಆರ್.ಅಶೋಕ್ ಅವರೇ, ವಾಲ್ಮೀಕಿ ನಿಗಮಕ್ಕೆ ಸಂಬಂಧಿಸಿದ ಹಗರಣದ ಬಗ್ಗೆ ನೀವು ಕೆಲವು ಪ್ರಶ್ನೆಗಳನ್ನು ಕೇಳಿದ್ದೀರಿ. ನಿಮಗೆ ಗೊತ್ತಿರುವಂತೆ ಈ ಪ್ರಕರಣದ ತನಿಖೆಗೆ ನಮ್ಮ ಸರಕಾರ ಎಸ್‍ಐಟಿ ರಚಿಸಿದೆ. ಇದಕ್ಕೆ ಸಂಬಂಧಿಸಿದಂತೆ ನಿಮಗೆ ಇಲ್ಲವೇ ನಿಮ್ಮ ಪಕ್ಷಕ್ಕೆ ಏನಾದರೂ ಹೇಳುವುದಿದ್ದರೆ, ಕೇಳುವುದಿದ್ದರೆ ಎಸ್‍ಐಟಿ ಮುಂದೆ ಹೋಗಿ ಕೇಳಿ, ಇಲ್ಲವೇ ಹೇಳಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.
ಸೋಮವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಎಸ್‌ಐಟಿ ಮುಂದೆ ಹೋಗುವುದನ್ನು ಬಿಟ್ಟು ಹಾದಿಬೀದಿಯಲ್ಲಿ ಮಾತನಾಡುವವರಂತೆ, ತಾವೇ ಕತೆ ಕಟ್ಟಿಕೊಂಡು ತಲೆಬುಡ ಇಲ್ಲದ ಅರ್ಥಹೀನ ಪ್ರಶ್ನೆಗಳನ್ನು ನನಗೆ ಕೇಳಿ ನಿಮ್ಮ ಸ್ಥಾನದ ಗೌರವವನ್ನು ನೀವೇ ಕಳೆದುಕೊಳ್ಳಬೇಡಿ. ನಮಗೆ ಪ್ರಶ್ನೆ ಕೇಳುವ ಮೊದಲು ನಿಮ್ಮದೇ ಪಕ್ಷದ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ನಿರಂತರವಾಗಿ ಪಕ್ಷದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಮಾಡುತ್ತಿರುವ ಗಂಭೀರ ಸ್ವರೂಪದ ಆರೋಪಗಳಿಗೆ ಉತ್ತರಿಸುವ ಧೈರ್ಯ ತೋರಿಸಿ’ ಎಂದು ಸವಾಲು ಹಾಕಿದ್ದಾರೆ.
‘ಭ್ರಷ್ಟಾಚಾರ, ವಿದ್ರೋಹ ಮತ್ತು ಸ್ವಜನಪಕ್ಷಪಾತವೂ ಸೇರಿದಂತೆ ಯತ್ನಾಳ್ ಮಾಡುತ್ತಿರುವ ಆರೋಪಗಳು ಗಂಭೀರ ಸ್ವರೂಪದ್ದಾಗಿವೆ. ಇಂತಹ ಆರೋಪಗಳನ್ನು ಮಾಡಿದ ನಂತರವೂ ಅವರ ವಿರುದ್ಧ ಬಿಜೆಪಿ ಹೈಕಮಾಂಡ್ ಯಾವುದೇ ಕ್ರಮಕೈಗೊಳ್ಳದಿರುವುದನ್ನು ನೋಡಿದರೆ ಅವರ ಆರೋಪಗಳಲ್ಲಿ ಸತ್ಯಾಂಶ ಇರುವುದನ್ನು ಪಕ್ಷದ ಹೈಕಮಾಂಡ್ ಒಪ್ಪಿಕೊಂಡಂತೆ ಕಾಣುತ್ತಿದೆ’ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಸನ್ಮಾನ್ಯ @RAshokaBJP ಅವರೇ,ವಾಲ್ಮೀಕಿ ಅಭಿವೃದ್ದಿ ನಿಗಮಕ್ಕೆ ಸಂಬಂಧಿಸಿದ ಹಗರಣದ ಬಗ್ಗೆ ನೀವು ಕೆಲವು ಪ್ರಶ್ನೆಗಳನ್ನು ಕೇಳಿದ್ದೀರಿ, ನಿಮಗೆ ಗೊತ್ತಿರುವಂತೆ ಈ ಪ್ರಕರಣದ ತನಿಖೆಗೆ ನಮ್ಮ ಸರ್ಕಾರ ಎಸ್.ಐ.ಟಿ ಯನ್ನು ರಚಿಸಿದೆ. ಇದಕ್ಕೆ ಸಂಬಂಧಿಸಿದಂತೆ ನಿಮಗೆ ಇಲ್ಲವೇ ನಿಮ್ಮ @BJP4Karnataka ಪಕ್ಷಕ್ಕೆ ಏನಾದರೂ ಹೇಳುವುದಿದ್ದರೆ ಇಲ್ಲವೇ…
— Siddaramaiah (@siddaramaiah) August 5, 2024