ಸಿದ್ದರಾಮಯ್ಯ ರಾಜೀನಾಮೆ ನೀಡದಿದ್ದರೆ ಅದು ಪ್ರಜಾಪ್ರಭುತ್ವ, ನ್ಯಾಯಾಂಗಕ್ಕೆ ಮಾಡುವ ಅವಮಾನ : ರವಿಕುಮಾರ್
ಬೆಂಗಳೂರು : ‘ಸಿದ್ದರಾಮಯ್ಯನವರು ಸಂವಿಧಾನ, ಪ್ರಜಾಪ್ರಭುತ್ವ ಮತ್ತು ನ್ಯಾಯಾಂಗಕ್ಕೆ ಗೌರವ ಕೊಟ್ಟು ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು’ ಎಂದು ಆಗ್ರಹಿಸಿ ಪ್ರತಿಪಕ್ಷ ಬಿಜೆಪಿ, ಬೀದಿಗಿಳಿದಿದೆ.
ಮಂಗಳವಾರ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದ ಬಳಿ ಪಕ್ಷದಿಂದ ನಡೆದ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದ ಬಿಜೆಪಿ ಮುಖಂಡ ಎನ್.ರವಿಕುಮಾರ್, ಸಿದ್ದರಾಮಯ್ಯನವರು ರಾಜೀನಾಮೆ ಕೊಡದಿದ್ದರೆ ಅದು ಪ್ರಜಾಪ್ರಭುತ್ವ, ನ್ಯಾಯಾಂಗ ಮತ್ತು ಸಂವಿಧಾನಕ್ಕೆ ಮಾಡುವ ಅವಮಾನ. ಈ ತೀರ್ಪು ನೀಡಿದ ಹೈಕೋರ್ಟ್ ನ್ಯಾಯಮೂರ್ತಿಗಳನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.
ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ‘ಕುರ್ಚಿ ಉಳಿಸಿಕೊಳ್ಳಲು ಭಂಡತನದಿಂದ ಪ್ರಯತ್ನ ಮಾಡಿದವರ ಇತಿಹಾಸ ಏನಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ರಾಜ್ಯದ ಗೌರವ ಉಳಿಸುವ ದೃಷ್ಟಿಯಿಂದ ನೈತಿಕ ಹೊಣೆ ಹೊತ್ತು ಕೂಡಲೇ ರಾಜೀನಾಮೆ ಕೊಡಿ ಎಂದು ಒತ್ತಾಯಿಸಿದರು.
ಸಿದ್ದರಾಮಯ್ಯನವರು ಹಿಂದೆ ಯಡಿಯೂರಪ್ಪರ ರಾಜೀನಾಮೆಗೆ ಆಗ್ರಹಿಸಿದ್ದರು. ನಿಮ್ಮ ಹಿಂದಿನ ಮಾತಿನಂತೆ ರಾಜೀನಾಮೆ ಕೊಡಿ. ನಾವೇನೂ ನಿಮ್ಮ ಕುರ್ಚಿ ಮೇಲೆ ಟವೆಲ್ ಹಾಕಿಲ್ಲ. ಸಿಎಂ ಸ್ಥಾನಕ್ಕಾಗಿ ನಾವೇನೂ ಬ್ರೇಕ್‍ಫಾಸ್ಟ್, ಡಿನ್ನರ್ ಮೀಟಿಂಗ್ ಮಾಡಿಲ್ಲ. ತನಿಖೆಯಲ್ಲಿ ನೀವು ನಿರ್ದೋಷಿ ಎಂದು ಸಾಬೀತಾದರೆ ಮತ್ತೆ ಮುಖ್ಯಮಂತ್ರಿ ಆಗಬಹುದಲ್ಲವೇ? ಎಂದು ಅವರು ಪ್ರಶ್ನಿಸಿದರು.