ಬೆಂಗಳೂರಿನ ನ್ಯಾಷನಲ್‌ ಕೊ-ಆಪರೇಟಿವ್‌ ಬ್ಯಾಂಕಿಗೆ ಹಲವು ನಿರ್ಬಂಧಗಳನ್ನು ವಿಧಿಸಿದ ಆರ್‌ಬಿಐ

Update: 2023-07-25 08:43 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಆರ್ಥಿಕ ಸಮಸ್ಯೆಯ ಸುಳಿಯಲ್ಲಿ ಸಿಲುಕಿರುವ ಬೆಂಗಳೂರು ಮೂಲದ ನ್ಯಾಷನಲ್‌ ಕೊ-ಆಪರೇಟಿವ್‌ ಬ್ಯಾಂಕ್‌ ಲಿಮಿಟೆಡ್‌ನ ಗ್ರಾಹಕರು ತಲಾ ಖಾತೆಯಿಂದ ರೂ 50,000 ವರೆಗೆ ಮಾತ್ರ ಹಿಂತೆಗೆದುಕೊಳ್ಳಬಹುದು ಎಂದು ಬ್ಯಾಂಕಿನ ಮೇಲೆ ಹಲವು ನಿರ್ಬಂಧಗಳನ್ನು ವಿಧಿಸಿರುವ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಹೇಳಿದೆ.

ತನ್ನ ಪೂರ್ವಾನುಮತಿಯಿಲ್ಲದೆ ನ್ಯಾಷನಲ್‌ ಕೊ-ಆಪರೇಟಿವ್‌ ಬ್ಯಾಂಕ್‌ ಇನ್ನು ಯಾವುದೇ ಹೊಸ ಸಾಲಗಳನ್ನು ನೀಡುವ ಹಾಗಿಲ್ಲ ಹಾಗೂ ಹೊಸ ಠೇವಣಿಗಳನ್ನೂ ಸ್ವೀಕರಿಸುವ ಹಾಗಿಲ್ಲ ಎಂದು ರಿಸರ್ವ್ ಬ್ಯಾಂಕ್‌ ಹೇಳಿದೆ.

ಠೇವಣಿದಾರರು ರೂ. 5 ಲಕ್ಷದವರೆಗಿನ ಡೆಪಾಸಿಟ್‌ ವಿಮಾ ಕ್ಲೇಮ್‌ ಮೊತ್ತವನ್ನು ಡೆಪಾಸಿಟ್‌ ಇನ್ಶೂರೆನ್ಸ್‌ ಎಂಡ್‌ ಕ್ರೆಡಿಟ್‌ ಗ್ಯಾರೆಂಟಿ ಕಾರ್ಪೊರೇಷನ್‌ನಿಂದ ಪಡೆಯಬಹುದು ಎಂದು ಆರ್‌ಬಿಐ ಹೇಳಿದೆ.

ಆದರೆ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದ ಮಾತ್ರಕ್ಕೆ ಬ್ಯಾಂಕಿನ ಪರವಾನಗಿ ರದ್ದುಗೊಳಿಸಲಾಗಿದೆ ಎಂದರ್ಥವಲ್ಲ ಎಂದು ಆರ್‌ಬಿಐ ಹೇಳಿದೆಯಲ್ಲದೆ ಬ್ಯಾಂಕಿನ ಆರ್ಥಿಕ ಸ್ಥಿತಿ ಸುಧಾರಿಸುವ ತನಕ ಅದು ನಿರ್ಬಂಧಗಳನ್ನು ಅನುಸರಿಸಿಕೊಂಡು ತನ್ನ ಬ್ಯಾಂಕಿಂಗ್‌ ವ್ಯವಹಾರವನ್ನು ಮುಂದುವರಿಸಬಹುದು ಎಂದು ಹೇಳಿದೆ.

ನಿರ್ಬಂಧಗಳನ್ನು ಜುಲೈ 24ರಿಂದ ಆರಂಭಗೊಂಡು ಆರು ತಿಂಗಳ ಕಾಲ ವಿಧಿಸಲಾಗಿದ್ದು ಹಾಗೂ ಪರಿಶೀಲನೆಗೆ ಒಳಪಡಲಿದೆ.

ಕೆಲವೊಂದು ನಿಯಮಗಳನ್ನು ಉಲ್ಲಂಘಿಸಿದೆ ಎಂದು ಹೇಳಿ ನ್ಯಾಷನಲ್‌ ಕೊ-ಆಪರೇಟಿವ್‌ ಬ್ಯಾಂಕ್‌ ಮೇಲೆ ಆರ್‌ಬಿಐ ಈ ವರ್ಷದ ಮೇ ತಿಂಗಳಿನಲ್ಲಿ ದಂಡ ವಿಧಿಸಿತ್ತು.

ಕಳೆದ ವಾರ್ಷಿಕ ವರದಿ ಪ್ರಕಾರ ಬ್ಯಾಂಕಿನಲ್ಲಿ ಮಾರ್ಚ್‌ 31, 2021 ರಲ್ಲಿದ್ದಂತೆ ರೂ. 1,679 ಕೋಟಿ ಮೊತ್ತದ ಠೇವಣಿಗಳಿವೆ ಹಾಗೂ ಬ್ಯಾಂಕ್‌ ರೂ. 1,128 ಕೋಟಿ ಮೊತ್ತದ ಸಾಲ ನೀಡಿದ. ಬ್ಯಾಂಕಿನ ಎನ್‌ಪಿಎ ಪ್ರಮಾಣ ಶೇ 27.81 ಆಗಿದೆ. ಬೆಂಗಳೂರಿನ ವಿವಿಧೆಡೆ ಬ್ಯಾಂಕಿಗೆ 13 ಶಾಖೆಗಳಿವೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News