KAE ಪರೀಕ್ಷೆಗಳಲ್ಲಿ ಬ್ಲೂಟೂತ್ ಬಳಕೆ ಪ್ರಕರಣ | ಉನ್ನತ ಮಟ್ಟದ ತನಿಖೆಗೆ ಸಿದ್ಧ: ಸಚಿವ ಪ್ರಿಯಾಂಕ್ ಖರ್ಗೆ

Update: 2023-11-01 16:14 GMT

ಕಲಬುರಗಿ, ನ.1: ಇತ್ತೀಚಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ನಡೆಸಿದ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಬ್ಲೂಟೂತ್ ಬಳಕೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡಿದ್ದು, ಅವಶ್ಯವೆನಿಸಿದರೆ ಉನ್ನತಮಟ್ಟದ ತನಿಖೆ ನಡೆಸಲು ಸರಕಾರ ಸಿದ್ದವಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. 

ಬುಧವಾರ ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾರದರ್ಶಕ ಹಾಗೂ ಕಟ್ಟುನಿಟ್ಟಿನ ಪರೀಕ್ಷೆ ನಡೆಸಲು ಅಗತ್ಯ ಮತ್ತು ಸೂಕ್ತ ಕ್ರಮಕೈಗೊಳ್ಳಲಾಗಿತ್ತು. ಹ್ಯಾಂಡ್ ಹೆಲ್ಡ್ ಡಿಟೆಕ್ಟರ್ ಹಾಗೂ ಮೆಟಲ್ ಡಿಟೆಕ್ಟರ್ ಬಳಸಲಾಗಿತ್ತು. ಆದರೂ ಕೆಲವೊಬ್ಬ ಅಭ್ಯರ್ಥಿಗಳು ಶರ್ಟ್ ಗಳಲ್ಲಿ ಡಿವೈಸ್ ಇಟ್ಟುಕೊಂಡು ಪರೀಕ್ಷಾ ಕೇಂದ್ರಗಳಿಗೆ ಹೋಗಿದ್ದರು ಎಂದರು.

ಈ ಮಾಹಿತಿ ಸಿಕ್ಕ ತಕ್ಷಣ ಪೊಲೀಸರು ಅಂತವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದರು. ನಂತರ ಬ್ಲೂಟೂಥ್ ಬಳಸಿ ಪರೀಕ್ಷೆಗಳಲ್ಲಿ ಉತ್ತರ ಬರೆಯುತ್ತಿದ್ದವನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳು ನಾಪತ್ತೆಯಾಗಿದ್ದು, ಅವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ತಕ್ಷಣ ಅಗತ್ಯ ಕ್ರಮ ವಹಿಸಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

ಅಕ್ರಮದಲ್ಲಿ ಹಿರಿಯ ಅಧಿಕಾರಿಯೊಬ್ಬರು ಭಾಗಿಯಾಗಿದ್ದಾರೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಕರಣದಲ್ಲಿ ಭಾಗಿಯಾಗಿರುವವರು ಯಾರೆ ಆಗಿದ್ದರೂ ಅಂತವರನ್ನು ಬಂಧಿಸಿ ಕಾನೂನು ಪ್ರಕಾರ ಶಿಕ್ಷೆಗೆ ಒಳಪಡಿಸದೇ ಬಿಡುವುದಿಲ್ಲ ಎಂದರು.

ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಬಿಜೆಪಿ ಒತ್ತಾಯಿಸುತ್ತಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್ ಖರ್ಗೆ, ಪ್ರಕರಣದ ತನಿಖೆಯನ್ನು ಪೆÇಲೀಸರು ಸಮಗ್ರವಾಗಿ ಕೈಗೊಳ್ಳುತ್ತಿದ್ದಾರೆ. ಆರೋಪಿಗಳ ಪತ್ತೆಗೆ ಶ್ರಮಿಸುತ್ತಿದ್ದಾರೆ. ಅಗತ್ಯ ಬಿದ್ದರೆ ಉನ್ನತ ಮಟ್ಟದ ತನಿಖೆ ಕೈಗೊಳ್ಳಲಾಗುವುದು. ಆದರೆ ಸಿಬಿಐಗೆ ವಹಿಸಲ್ಲ. ಪಿಎಸ್ಸೈ ನೇಮಕಾತಿ ಹಗರಣವನ್ನು ಬಿಜೆಪಿ ಯಾಕೆ ಸಿಬಿಐಗೆ ವಹಿಸಿರಲಿಲ್ಲ ಎಂದು ಮರು ಪ್ರಶ್ನೆ ಹಾಕಿದರು.

ರಾಜ್ಯದಲ್ಲಿ ಭೀಕರ ಬರಗಾಲ ಬಿದ್ದಿದೆ. ಬರ ಪರಿಹಾರವಾಗಿ ಸುಮಾರು 17 ಸಾವಿರ ಕೋಟಿ ರೂ.ಹಣ ಬಿಡುಗಡೆ ಮಾಡುವಂತೆ ಕೇಂದ್ರ ಗೃಹ ಕಾರ್ಯದರ್ಶಿ ಹಾಗೂ ಕೃಷಿ ಇಲಾಖೆ ಕಾರ್ಯದರ್ಶಿಗಳನ್ನು ಇತ್ತೀಚೆಗೆ ದಿಲ್ಲಿಯಲ್ಲಿ ಭೇಟಿ ಮಾಡಿ ಬಂದಿದ್ದೇವೆ. ಈಗಿರುವ ಎನ್.ಡಿ.ಆರ್.ಎಫ್ ನಿಯಮದ ಪ್ರಕಾರ ಪರಿಹಾರ ಬಿಡುಗಡೆ ಮಾಡಿದರೆ ಹೆಚ್ಚಿನ ಪರಿಹಾರ ಲಭಿಸುವುದಿಲ್ಲ ಹಾಗಾಗಿ ಎನ್.ಡಿ.ಆರ್.ಎಫ್ ನಿಯಮಾವಳಿಗಳಿಗೆ ಅಗತ್ಯ ಬದಲಾವಣೆ ತರುವಂತೆ ಒತ್ತಾಯಿಸಿ ಸಿಎಂ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಆದರೂ ರಾಜ್ಯ ಸರಕಾರ ಎಸ್.ಡಿ.ಆರ್.ಎಫ್ ನಿಯಮದ ಪ್ರಕಾರ ಬರ ಪರಿಹಾರ ಬಿಡುಗಡೆ ಮಾಡಲಿದೆ ಎಂದು ಅವರು ಹೇಳಿದರು.

ಕೇಂದ್ರದಿಂದ ನರೇಗಾ ಯೋಜನೆಯಡಿಯಲ್ಲಿ ರಾಜ್ಯಕ್ಕೆ ಬರಬೇಕಾದ ಕೂಲಿ 700 ಕೋಟಿ ರೂ.ಬಿಡುಗಡೆ ಮಾಡುವಂತೆ ಈಗಾಗಲೇ ಪತ್ರ ಬರೆಯಲಾಗಿದೆ. ಅದಲ್ಲದೇ ಈಗಿರುವ 100 ದಿನಗಳ ಮಾನವ ದಿನಗಳನ್ನು 150ಕ್ಕೇರಿಸಲು ಬೇಡಿಕೆ ಇದೆ. ಇದನ್ನು ಕೇಂದ್ರ ಸರಕಾರವೇ ಮಾಡಬೇಕು. ರಾಜ್ಯದ ವಾರ್ಷಿಕ ಮಿತಿ 13 ಕೋಟಿ ಮಾನವದಿನಗಳಿದ್ದು ಈಗಾಗಲೇ 10 ಕೋಟಿ ಮಾನವ ದಿನ ಸೃಜನೆಯಾಗಿದೆ ಎಂದು ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದರು.

ಬರಗಾಲವಿರುವುದರಿಂದ 13 ಕೋಟಿಗೆ ಬದಲು 18 ಕೋಟಿ ಮಾನವ ದಿನ ಹೆಚ್ಚಿಸುವಂತೆ ಬೇಡಿಕೆ ಸಲ್ಲಿಸಲಾಗಿದೆ. ಆದರೆ ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬದಲಿಗೆ, ವಾರ್ಷಿಕ 75 ಸಾವಿರ ಕೋಟಿ ರೂ. ಇದ್ದ ನರೇಗಾ ಬಜೆಟ್ ಅನ್ನು 60 ಸಾವಿರ ಕೋಟಿ ರೂ.ಗಳಿಗೆ ಇಳಿಸಲಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಈ ಹಿಂದಿನ ಸರಕಾರ ವಿದ್ಯುತ್ ಉತ್ಪಾದನೆಗೆ ಒತ್ತುಕೊಡದೆ ಇರುವುದರಿಂದ ಈಗ ಬೇಡಿಕೆ ಹೆಚ್ಚಾಗಿದೆ. ಹಾಗಾಗಿ ಉತ್ತರಪ್ರದೇಶ ಹಾಗೂ ಪಂಜಾಬ್ ನಿಂದ ವಿದ್ಯುತ್ ಖರೀದಿ ಹಾಗೂ ಛತ್ತಿಸ್ ಗಡ್ ನಿಂದ ಕಲ್ಲಿದ್ದಲು ಖರೀದಿ ಮಾಡಲು ಸರಕಾರ ಮುಂದಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಅಲ್ಲಮಪ್ರಭು ಪಾಟೀಲ್ ಹಾಗೂ ತಿಪ್ಪಣ್ಣಪ್ಪ ಕಮಕನೂರು ಇದ್ದರು.

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News