ಸಾಕ್ಷ್ಯನಾಶದ ಆರೋಪ ನಿರಾಧಾರ, ಯಾವುದೇ ತನಿಖೆಗೂ ಸಿದ್ದ: ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್

Update: 2024-06-08 12:42 GMT

ಬೆಂಗಳೂರು: ಒಂದು ವೇಳೆ ನನ್ನ ಕಚೇರಿಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮ ಮಂಡಳಿಯ ಸಾಕ್ಷ್ಯ ನಾಶಗಳ ಕುರಿತಾಗಿ ನಾನು ಯಾವುದಾದರೂ ವ್ಯಕ್ತಿಗಳ ಜೊತೆ ಸಭೆ ನಡೆಸಿದ್ದರೆ ಮುಕ್ತ ಮತ್ತು ನ್ಯಾಯಸಮ್ಮತ ತನಿಖೆಗೆ ಸಿದ್ಧನಿದ್ದೇನೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಬಹಿರಂಗ ಸವಾಲು ಹಾಕಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಕರಣ ಕುರಿತಾಗಿ ತನಿಖೆ ನಡೆಸುತ್ತಿರುವ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡಿದರು.

ಮೇ 24ರಂದು ಬೆಂಗಳೂರಿನ ವಿಕಾಸಸೌಧದ ನನ್ನ ಕಚೇರಿಯಲ್ಲಿ ನಾನು, ವಾಲ್ಮೀಕಿ ಅಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷ ಬಸವರಾಜ್ ದದ್ದಲ್ ಸೇರಿದಂತೆ ಕೆಲವರು ಸಭೆ ನಡೆಸಿ ಸಾಕ್ಷ್ಯ ನಾಶ ಮಾಡಿದ್ದೇನೆ ಆರೋಪ ಕೇಳಿಬಂದಿದೆ. ವಾಸ್ತವವಾಗಿ ಮೇ 24ರಂದು ಲೋಕಸಭಾ ಕ್ಷೇತ್ರದ ಹಿನ್ನೆಲೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಕಚೇರಿಗೆ ಭೇಟಿ ನೀಡಿರಲಿಲ್ಲ. ಆದರೂ ನಾನು ಕಚೇರಿಯಲ್ಲಿ ಇದ್ದೆ ಎಂದರೆ, ಇದಕ್ಕಿಂತ ಅಪಹಾಸ್ಯ ಇನ್ನೇನಿದೆ ಎಂದು ತಮ್ಮ ಮೇಲಿನ ಆರೋಪಗಳನ್ನು ತಳ್ಳಿ ಹಾಕಿದರು. ಯಾವುದೇ ತನಿಖೆ ಮಾಡಿದರೂ ನಾನು ಕಾನೂನುಬದ್ದವಾಗಿ  ಎದುರಿಸಲು ಸಿದ್ದನಿದ್ದೇನೆ ಎಂದು ಹೇಳಿದರು.

ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ ತೃಪ್ತಿ ಇದೆ. ಸುಳ್ಳು ಆರೋಪಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಪಾಟೀಲ್ ತಿರುಗೇಟು ನೀಡಿದರು. ಅಷ್ಟಕ್ಕೂ ವಿಕಾಸಸೌಧದ ಕೊಠಡಿಯು ಸರ್ಕಾರ ನೀಡಿರುವ ಕಚೇರಿ. ಅದು ನನ್ನ ಸ್ವಂತ ಮನೆಯೂ ಅಲ್ಲ. ನಾನು ಸಚಿವನಾಗಿರುವುದರಿಂದ ನನ್ನನ್ನು ನೋಡಲು ರಾಜ್ಯದ ನಾನಾ ಭಾಗಗಳಿಂದ ನೂರಾರು ಜನ ಬಂದು ಹೋಗುತ್ತಾರೆ. ಬಂದುಹೋಗುವವರ ಪೂರ್ಣ ವಿವರಗಳನ್ನು ಕಲೆ ಹಾಕಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಎಸ್‍ಐಟಿ ವಶದಲ್ಲಿರುವ ವ್ಯಕ್ತಿಯ ಮುಖವೂ ನೋಡಿಲ್ಲ. ನನಗೂ, ಅವರಿಗೂ ಯಾವುದೇ ಸಂಬಂಧವೂ ಇಲ್ಲ. ಎಸ್‍ಐಟಿ ಅಧಿಕಾರಿಗಳ ಮುಂದೆ ಆತ ಏನು ಹೇಳಿದ್ದಾನೆ ಎಂಬುದು ನನಗೂ ಗೊತ್ತಿಲ್ಲ. ವೈದ್ಯಕೀಯ ಶಿಕ್ಷಣ ಸಚಿವರು ಎಂದು ಎಲ್ಲಾದರೂ ಹೇಳಿರುವ ಬಗ್ಗೆ ವರದಿಯಾಗಿದೆಯೇ? ಊಹಾಪೋಹಗಳಿಗೆ ನಾನೇಕೆ ಉತ್ತರ ಕೊಡಲಿ ಎಂದು ಪಾಟೀಲ್ ಪ್ರಶ್ನಿಸಿದರು. 

ಎಸ್‍ಐಟಿ ತನಿಖೆ ನಡೆಸುತ್ತಿದೆ. ಬಂಧಿತ ಆರೋಪಿಗಳು ಏನು ಹೇಳಿಕೆ ಕೊಟ್ಟಿದ್ದಾರೆ ಎಂಬುದು ನನಗೂ ಗೊತ್ತಿಲ್ಲ. ಸರ್ಕಾರಕ್ಕೂ ತಿಳಿದಿಲ್ಲ. ಅಂತೆಕಂತೆಗಳಿಗೆ ಉತ್ತರ ಕೊಡಲು ಅಗತ್ಯವೂ ನನಗೆ ಬಂದಿಲ್ಲ. ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ ಎಂದ ಮೇಲೆ ಆರೋಪಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು. ನಾನು ನನ್ನ ಕಚೇರಿಯಲ್ಲಿ ಸಭೆ ನಡೆಸಿದ್ದರೆ ಸಿಸಿಟಿವಿಯ ದೃಶ್ಯಗಳನ್ನು ತೆಗೆದು ಪರಿಶೀಲಿಸಲಿ. ಈ ಕುರಿತು ಸರ್ಕಾರ ತನಿಖೆ ನಡೆಸಿದರೂ ನನ್ನ ಅಭ್ಯಂತರವಿಲ್ಲ. ತನಿಖೆಯಲ್ಲಿ ಸತ್ಯಸತ್ಯತೆ ಹೊರಬರಲಿದೆ. ಯಾರೇ ತಪ್ಪೇ ಮಾಡಿದರೂ ಕಾನೂನು ಪ್ರಕಾರ ಶಿಕ್ಷೆಯಾಗುತ್ತದೆ ಎಂದರು.

ಹಿಂದೆಯೂ ಸಚಿವರಾಗಿದ್ದ ವೇಳೆ ಇಲಾಖೆ, ಸರ್ಕಾರ ಮತ್ತು ಪಕ್ಷಕ್ಕೆ ಹೆಸರು ಬರುವ ಕೆಲಸ ಮಾಡುತ್ತಿದ್ದೇನೆ. ನಾನು ಸತ್ಯ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡುವವನು. ಇಂತಹ ಆರೋಪವನ್ನು ಕನಸಿನಲ್ಲೂ ಊಹಿಸಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬಿಜೆಪಿಯವರು ರಾಜೀನಾಮೆ ಕೇಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾವ ಆಧಾರದ ಮೇಲೆ ಅವರು ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ ಎಂದ ಮೇಲೆ ರಾಜೀನಾಮೆ ನೀಡುವ ಔಚಿತ್ಯವಾದರೂ ಏನು ಎಂದು ಶರಣಪ್ರಕಾಶ್ ಪಾಟೀಲ್ ಮರು ಪ್ರಶ್ನೆ ಹಾಕಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News