ಕೆಪಿಸಿಸಿಗೆ ನೂತನ ಪದಾಧಿಕಾರಿಗಳ ಪರಿಷ್ಕೃತ ಪಟ್ಟಿ ಬಿಡುಗಡೆ
ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ)ಗೆ ನೂತನ ಪದಾಧಿಕಾರಿಗಳ ಪರಿಷ್ಕೃತ ಪಟ್ಟಿಯನ್ನು ಬಿಡುಗಡೆಗೊಳಿಸಿ ಎಐಸಿಸಿ ಬುಧವಾರ ಆದೇಶ ಹೊರಡಿಸಿದೆ.
ಇತ್ತೀಚೆಗೆ ಕೆಪಿಸಿಸಿಗೆ ಹೊಸ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿತ್ತು. ಬುಧವಾರ ಪಟ್ಟಿಯನ್ನು ಮತ್ತೊಮ್ಮೆ ಪರಿಷ್ಕೃತಗೊಳಿಸಲಾಗಿದ್ದು, ಹೊಸದಾಗಿ ಕೆಲವು ನಾಯಕರ ಹೆಸರನ್ನು ಸೇರಿಸಲಾಗಿದೆ. ಪ್ರಧಾನ ಕಾರ್ಯದರ್ಶಿ 138 ಇದ್ದಿದ್ದನ್ನು 140ಕ್ಕೆ ಹೆಚ್ಚಿಸಿ ಎಐಸಿಸಿ ಆದೇಶದಲ್ಲಿ ತಿಳಿಸಿದೆ.
ರಾಜಾಜಿನಗರದ ರಘುವೀರ್ ಗೌಡ ಬಿಟ್ಟು ಭವ್ಯಾ ನರಸಿಂಹಮೂರ್ತಿ ಅವರಿಗೆ ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡಲಾಗಿದೆ. ಬಿ.ಆರ್.ನಾಯ್ಡು, ಶಿವಕುಮಾರ್, ಸಂಜಯ್ ಜಾಗಿದಾರ್, ಸುಶುತ್ ಗೌಡ, ರಾಬರ್ಟ್ ದೊಡ್ಡಪುರ, ಅನಿಲ್ ಕುಮಾರ್‌ಗೆ ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡಲಾಗಿದೆ.
ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ಇತ್ತೀಚೆಗೆ ಮಹತ್ವದ ಬದಲಾವಣೆ ಮಾಡಲಾಗಿತ್ತು. ಹಳಬರನ್ನು ಕೈಬಿಟ್ಟು ಹೊಸ-ಹೊಸ ಮುಖಗಳಿಗೆ ಕೆಪಿಸಿಸಿ ನೂತನ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು.
43 ರಾಜ್ಯ ಉಪಾಧ್ಯಕ್ಷರು, 138 ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿತ್ತು. ಇದರ ಜೊತೆಗೆ ಮಾಧ್ಯಮ ಮತ್ತು ಸಂವಹನ ಮುಖ್ಯಸ್ಥರಾಗಿ ರಮೇಶ್ ಬಾಬು ನೇಮಕವಾಗಿದ್ದರೆ, ಸಾಮಾಜಿಕ ಜಾಲತಾಣ ಸಹ–ಮುಖ್ಯಸ್ಥರಾಗಿ ವಿನಯ್ ಮತ್ತಿಕಟ್ಟಿ ಮತ್ತು ನಿಕೇತ್ ರಾಜ್ ಮೌರ್ಯ ಅವರನ್ನು ನೇಮಿಸಲಾಗಿತ್ತು. ಇನ್ನು ಕೆಪಿಸಿಸಿ ಪ್ರಚಾರ ಸಮಿತಿ ಸಹ-ಮುಖ್ಯಸ್ಥರಾಗಿ ಪಿ.ಟಿ.ಪರಮೇಶ್ವರ್ ನಾಯಕ್ ಅವರನ್ನು ನೇಮಕ ಮಾಡಲಾಗಿತ್ತು.