ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 145.50 ಕೋಟಿ ರೂ.ಅನುದಾನ ಬಿಡುಗಡೆಗೊಳಿಸಿದ ರಾಜ್ಯ ಸರಕಾರ

Update: 2023-08-17 12:14 GMT

ಬೆಂಗಳೂರು, ಆ. 17: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 2023-24ನೆ ಸಾಲಿನ ಆಯವ್ಯಯದಲ್ಲಿ ಒದಗಿಸಿರುವ ಅನುದಾನದಡಿ ಮೊದಲನೆ ಕಂತಿನ ಅನುದಾನವನ್ನು ರಾಜ್ಯ ಸರಕಾರ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದೆ.

ಗುರುವಾರ ಈ ಸಂಬಂಧ ಪ್ರದೇಶ ಮಂಡಳಿ ವಿಭಾಗ ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖಿಕ ಇಲಾಖೆ ನಿರ್ದೇಶಕ ಡಿ.ಚಂದ್ರಶೇಖರಯ್ಯ ಆದೇಶ ಹೊರಡಿಸಿದ್ದು, ಆಯವ್ಯಯ ಅಂದಾಜಿನಲ್ಲಿ ಮೊದಲನೆಯ ಕಂತಿನ ಅನುದಾನ (224 ಕ್ಷೇತ್ರಗಳು ಹಾಗೂ 67 ಮಂದಿ ಪರಿಷತ್ ಸದಸ್ಯರಿಗೆ) ಪ್ರತಿ ಕ್ಷೇತ್ರಕ್ಕೆ ತಲಾ 50 ಲಕ್ಷ ರೂ.ಗಳಂತೆ ಒಟ್ಟು 145.50 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಶಾಸಕರು ಅನುದಾನವನ್ನು ಉಪವಿಭಾಗಾಧಿಕಾರಿಗಳು ಹಾಗೂ ಪರಿಷತ್ ಸದಸ್ಯರು ಅನುದಾನವನ್ನು ಜಿಲ್ಲಾಧಿಕಾರಿಗಳು ನಿರ್ವಹಿಸುವಂತೆ ಸೂಚಿಸಲಾಗಿದೆ. ಆರ್ಥಿಕ ಇಲಾಖೆಯ ಒಪ್ಪಿಗೆ ಮೇರೆಗೆ ಜಿಲ್ಲಾಧಿಕಾರಿಗಳಿಗೆ ಅನುದಾನ ಬಿಡುಗಡೆ ಮಾಡುವ ಹಿನ್ನೆಲೆಯಲ್ಲಿ, ಪ್ರಸ್ತುತ 2023-24ನೆ ಸಾಲಿನ ಮೊದಲನೆ ಕಂತಿನ ಅನುದಾನವನ್ನು ಜಿಲ್ಲಾಧಿಕಾರಿಗಳ ಪಿ.ಡಿ.ಖಾತೆಗೆ ಖಜಾನೆ-2ರ ಮೂಲಕ ಬಿಡುಗಡೆಗೊಳಿಸಲಾಗಿದೆ.

ಆಯಾ ಜಿಲ್ಲೆಯ, ಉಪವಿಭಾಗಾಧಿಕಾರಿಗಳಿಗೆ ಈ ಯೋಜನೆಯ ಅನುದಾನ ವರ್ಗಾವಣೆ ಮಾಡಲಾಗುತ್ತದೆ. ನಿಯಮಾನುಸಾರ ಹಣ ಬಳಕೆ ಪ್ರಮಾಣ ಪತ್ರವನ್ನು ಜಿಲ್ಲಾಧಿಕಾರಿಗಳ/ ಉಪವಿಭಾಗಾಧಿಕಾರಿಗಳ ಮೇಲು ಸಹಿಯೊಂದಿಗೆ ಸರಕಾರಕ್ಕೆ ಸಲ್ಲಿಸಬೇಕು. ಬಿಡುಗಡೆ ಮಾಡಿದ ಅನುದಾನವನ್ನು ನಿಗದಿತ ಅವಧಿಯಲ್ಲಿ ಮಾಡಿಕೊಳ್ಳಬೇಕೆಂದು ಸೂಚಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News